ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಭರ್ತಿ: ಬಾಗಿನ ಅರ್ಪಿಸಲು ಸಿದ್ಧತೆ
ವಿಜಯಪುರ:ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯ ಇಂದು (ಬುಧವಾರ) ಸಂಪೂರ್ಣ ಭರ್ತಿಯಾಗಿದ್ದು, ಸಾಂಪ್ರದಾಯಿಕವಾಗಿ ಸರ್ಕಾರದ ವತಿಯಿಂದ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಸಿದ್ಧತೆ ಆರಂಭಗೊಂಡಿದೆ. 519.60 ಮೀಟರ್ ಎತ್ತರ ಹಾಗೂ 123.81 ಟಿಎಂಸಿ ನೀರಿನ ಸಾಮರ್ಥ್ಯವಿರುವ ಜಲಾಶಯದಲ್ಲಿ ಇಂದು 519.60 ಮೀಟರ್ ನೀರು ಸಂಗ್ರಹವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇದೇ ತಿಂಗಳು ಬಾಗಿನ ಅರ್ಪಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೃಷ್ಣ ಭಾಗ್ಯ ಜಲ ನಿಗಮ ಮಂಡಳಿಯ ಪ್ರಭಾರಿ ಕಿರಿಯ ಇಂಜಿಯನರ್ ಡಿ.ಬಸವರಾಜ ಪ್ರತಿಕ್ರಿಯೆ ನೀಡಿದ್ದು, "ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ದಿನಾಂಕ ನಿಗದಿ ಮಾಡಿದ ಮೇಲೆ ಬಾಗಿನ ಅರ್ಪಿಸಲಾಗುವುದು. ನಮ್ಮ ಇಲಾಖೆಯಿಂದ ಈಗಾಗಲೇ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅವರು ನೀಡುವ ದಿನಾಂಕದಂದು ಬಾಗಿನ ಅರ್ಪಿಸಲಾಗುವುದು" ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿ, "ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ಬಾಗಿನ ಅರ್ಪಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ ಬಾಗಿನ ಅರ್ಪಿಸಲು ಆಹ್ವಾನಿಸಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ:ತುಂಗಭದ್ರಾ ಡ್ಯಾಂ ಹೂಳು ತೆಗೆಯುವಂತೆ ಕೋರಿ ಮೋದಿಗೆ ಪತ್ರ ಬರೆದ ವಿ.ಎಸ್.ಉಗ್ರಪ್ಪ