ಸಿದ್ಧೇಶ್ವರ ಜಾತ್ರಾ ಮಹೋತ್ಸವ: ಭಂಡಾರ ಎರಚಿ ಭಕ್ತರ ಸಂಭ್ರಮ - ಕಾಗವಾಡ ತಾಲೂಕಿನ ಐನಾಪುರ
ಚಿಕ್ಕೋಡಿ(ಬೆಳಗಾವಿ):ಕಾಗವಾಡ ತಾಲೂಕಿನ ಐನಾಪುರ ಸಿದ್ದೇಶ್ವರ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ದೇವಸ್ಥಾನ ಆವರಣದಲ್ಲಿ ಸಿದ್ದೇಶ್ವರ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು. ಭಂಡಾರದೊಡೆಯ ಎಂಬ ಪ್ರಖ್ಯಾತಿ ಹೊಂದಿರುವ ಗಡಿ ಭಾಗದ ಈ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಹಲವು ಗ್ರಾಮದ ಪಲ್ಲಕ್ಕಿ ಉತ್ಸವ ಭಾಗವಹಿಸುವುದು ವಾಡಿಕೆ.
ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಉತ್ಸವ ಮೂರ್ತಿಗಳಿಗೆ ಭಂಡಾರ ಎರಚಿ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಭಕ್ತರು ಎರಚಿದ ಭಂಡಾರ ರಸ್ತೆಯಲ್ಲಿ ಬಿದ್ದು ಗ್ರಾಮವೆಲ್ಲ 3 ದಿನಗಳ ಕಾಲ ಹೊನ್ನಿನ ರೀತಿಯಲ್ಲಿ ಭಾಸವಾಗುತ್ತದೆ.
ಬಿಳಿ ದನಗಳ ಜಾತ್ರೆ ಎಂದೇ ಪ್ರಖ್ಯಾತಿ: ಐನಾಪುರ ಸಿದ್ದೇಶ್ವರ ಜಾತ್ರೆ ಬಿಳಿ ದನಗಳ ಜಾತ್ರೆ ಎಂದೇ ಪ್ರಸಿದ್ಧಿ. ಈ ಜಾತ್ರೆಯಲ್ಲಿ ಲಕ್ಷಾಂತರ ಎತ್ತು, ಹೋರಿ, ಆಕಳು ಮಾರಾಟವಾಗುತ್ತವೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆಯನ್ನು ರದ್ದು ಮಾಡಲಾಗಿತ್ತು. ಆದರೆ ಈ ವರ್ಷವೂ ಚರ್ಮ ಗಂಟು ರೋಗ ಉಲ್ಬಣವಾದ ಕಾರಣಕ್ಕೆ ದನದ ಜಾತ್ರೆಗೆ ಹಿನ್ನಡೆಯಾಗಿದ್ದು, ರೈತರಲ್ಲಿ ಬೇಸರ ಮೂಡಿಸಿದೆ.