ರಾಯಚೂರಿಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ: ಹೋರಾಟ ಸಮಿತಿ ಆಕ್ರೋಶ
ರಾಯಚೂರು:ರಾಜ್ಯ ಬಜೆಟ್ನಲ್ಲಿ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದೇ ಏಮ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಿರುವುದನ್ನು ಖಂಡಿಸಿ ಏಮ್ಸ್ ಸ್ಥಾಪನೆ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, 2023-24ನೇ ಸಾಲಿನ ಆಯವ್ಯಯದಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದು ಖಂಡನೀಯ. ಕಳೆದ 281 ದಿನಗಳಿಂದ ನಿರಂತರವಾಗಿ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಹೋರಾಟ ನಡೆಯುತ್ತಿದೆ. ಸುದೀರ್ಘ ಹೋರಾಟಕ್ಕೆ ಬೆಲೆ, ಗೌರವ ಸಿಕ್ಕಿಲ್ಲ ಎಂದರು.
ಮಾದರಿ ಏಮ್ಸ್ ನಿರ್ಮಾಣ ಮಾಡಿ ಹೋರಾಟ ಸಮಿತಿಯನ್ನು ಶಾಂತಗೊಳಿಸಿ ಬಳಿಕ ಏಮ್ಸ್ ಅನ್ನು ಧಾರವಾಡಕ್ಕೆ ಕೊಂಡೊಯ್ಯುವ ಹುನ್ನಾರ ನಡೆದಿದೆ. ಈ ಹಿಂದೆ ಜಿಲ್ಲೆಗೆ ಬರಬೇಕಿದ್ದ ಐಐಟಿಯನ್ನು ಧಾರವಾಡಕ್ಕೆ ಕೊಂಡೊಯ್ಯಲಾಯಿತು. ಹೀಗಾಗಿ, ಇದೊಂದು ಅವೈಜ್ಞಾನಿಕ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಏಮ್ಸ್ ಬರುವವರೆಗೂ ಹೋರಾಟ ಮುಂದುವರೆಯಲಿದೆ, ಜೀವ ಕೊಟ್ಟೇವು ಆದರೆ ಏಮ್ಸ್ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:Karnataka Budget 2023: ರಾಜ್ಯ ಬಜೆಟ್ ಹೈಲೈಟ್ಸ್ - ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಹಂಚಿಕೆ?