ಬೆಳಗಾವಿ: ಕೈ ಮಾಡಿದರೂ ನಿಲ್ಲದ ಬಸ್ ಮೇಲೆ ವಿದ್ಯಾರ್ಥಿಗಳಿಂದ ಕಲ್ಲೆಸೆತ.. ಪುಡಿ ಪುಡಿಯಾದ ಹಿಂಬದಿ ಗ್ಲಾಸ್ - ಕೆಎಸ್ಆರ್ಟಿಸಿ ಬಸ್ ಸಮಸ್ಯೆ
Published : Sep 4, 2023, 1:35 PM IST
ಬೆಳಗಾವಿ: ಕೈ ಮಾಡಿದರೂ ಸಹ ಚಾಲಕ ಕೆಎಸ್ಆರ್ಟಿಸಿ ಬಸ್ ನಿಲ್ಲಿಸದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ವಿದ್ಯಾರ್ಥಿಗಳು, ಬಸ್ ಮೇಲೆ ಕಲ್ಲು ಎಸೆದಿರುವ ಘಟನೆ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನಡೆದಿದೆ. ದೊಡವಾಡ ಗ್ರಾಮದಿಂದ ಬೈಲಹೊಂಗಲಕ್ಕೆ ಬಸ್ ಹೊರಟಿದ್ದ ವೇಳೆ ನಯಾನಗರ ಗ್ರಾಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ಲಿಸುವಂತೆ ಕೈ ಮಾಡಿದ್ದಾರೆ. ಆದರೂ ಚಾಲಕ ಬಸ್ ನಿಲ್ಲಿಸದೇ ಮುಂದೆ ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಬಸ್ ಹಿಂಭಾಗದ ಗ್ಲಾಸಿಗೆ ಕಲ್ಲು ಎಸೆದಿದ್ದಾರೆ. ಇದರಿಂದ ಬಸ್ ಗಾಜು ಪುಡಿ ಪುಡಿಯಾಗಿದೆ.
ಬಳಿಕ ಕಾಲೇಜು ವಿದ್ಯಾರ್ಥಿಗಳು, ಚಾಲಕ ಮತ್ತು ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಬಸ್ ದಾರಿ ಮಧ್ಯೆ ನಿಂತಿದ್ದರಿಂದ ಸಂಚಾರಕ್ಕೆ ತೊಂದೆರೆಯಾಗಿ ರಸ್ತೆಯಲ್ಲಿ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಮರ್ಪಕ ಬಸ್ ಸೇವೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಇದನ್ನೂ ಒದಿ: ಊರಿಗೆ ತೆರಳಲು ನಿಲ್ಲಿಸದ ಬಸ್ಗೆ ಕಲ್ಲೆಸೆದ ಮಹಿಳೆ.. 5000 ದಂಡ, ಅದೇ ಬಸ್ನಲ್ಲಿ ಪ್ರಯಾಣ