ಅಫ್ಘಾನಿಸ್ತಾನ ಪ್ರಜೆಯಾಗಿದ್ದರೂ ಅರಳು ಹುರಿದಂತೆ ಕನ್ನಡ ಮಾತನಾಡ್ತಾರೆ ಈ ವ್ಯಕ್ತಿ - ವಿಡಿಯೋ ವೈರಲ್ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Published : Sep 21, 2023, 8:50 PM IST
ದೇವನಹಳ್ಳಿ: ಅಘ್ಘಾನಿಸ್ತಾನದ ಪ್ರಜೆಯೊಬ್ಬರು ಸ್ವಚ್ಛಂದವಾಗಿ ಕನ್ನಡ ಮಾತನಾಡಿರುವ ವಿಡಿಯೋ ಕನ್ನಡಿಗರ ಹೃದಯ ಗೆದ್ದಿದೆ. ಕರ್ನಾಟಕ ಮತ್ತು ಮೈಸೂರು ನನ್ನ ಹೃದಯದಲ್ಲಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಎತ್ತಣ ಮಾಮರ, ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ? ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯಾ? ಗುಹೇಶ್ವರಲಿಂಗಕ್ಕೂ ಎನಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬ ಅಲ್ಲಮ ಪ್ರಭುವಿನ ವಚನದ ತಿರುಳಿನಂತೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ವಾಸವಿರುವ ಅಘ್ಘಾನಿಸ್ತಾನದ ಪ್ರಜೆಯೊಬ್ಬರು ಕನ್ನಡ ಭಾಷೆ ಮತ್ತು ಕರ್ನಾಟಕದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಅವರಾಡಿರುವ ಮಾತು ಕನ್ನಡಿಗರಿಗೆ ಹೆಮ್ಮೆ ತರುವಂತಿದೆ. ಕರ್ನಾಟಕದಲ್ಲೇ ಹುಟ್ಟಿ ಕನ್ನಡ ಭಾಷೆ ಮಾತನಾಡಲು ಹಿಂಜರಿಯುವ ಕೆಲವರಿಗೆ ಈ ವ್ಯಕ್ತಿ ಖುಷಿಯಿಂದಲೇ ಕರುನಾಡಿನ ಮಹತ್ವ ಸಾರಿದ್ದಾರೆ.
ನಾವು ಎಲ್ಲಿರುತ್ತೇವೆಯೋ ಅಲ್ಲಿನ ಭಾಷೆ ಕಲಿಯಬೇಕು- ರೈಜ್: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಪ್ರಯಾಣಿಕರೊಬ್ಬರು ಅಘ್ಘಾನಿಸ್ತಾನದ ಪ್ರಜೆಯನ್ನು ಮಾತನಾಡಿಸಿದರು. ಆತ ಕನ್ನಡದಲ್ಲೇ ಅರಳು ಹುರಿದಂತೆ ಮಾತನಾಡಿರುವುದು ಎಲ್ಲರ ಗಮನ ಸೆಳೆದಿದೆ. ರೈಜ್ ಎಂಬ ಹೆಸರಿನ ವ್ಯಕ್ತಿಯೂ 2006ರಿಂದ ಮೈಸೂರಿನಲ್ಲಿ ವಾಸವಿದ್ದು, ಅವರು ಕನ್ನಡ ಭಾಷೆಯನ್ನು ಕಲಿತಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿ ಇರುವವರು ಕನ್ನಡ ಕಲಿಯಬೇಕು ಅಂತಾರೆ.
ರೈಜ್ ಪ್ರತಿಕ್ರಿಯೆಸಿದ್ದು ಹೀಗೆ?ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು. ಅದಕ್ಕೆ ಕರ್ನಾಟಕ ಮೈಸೂರು ನನಗೆ ಅಚ್ಚುಮೆಚ್ಚು. ಪ್ರತಿಯೊಬ್ಬರು ಶ್ರೀಮಂತ ಭಾಷೆ ಆಗಿರುವ ಕನ್ನಡ ಕಲಿಯಬೇಕು ಎಂದು ವಿದೇಶಿಗರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಕೋಲಾರದ ಗಣೇಶೋತ್ಸವಕ್ಕೆ ಬಂದ ನಟ ಧ್ರುವ ಸರ್ಜಾ.. ಅಭಿಮಾನಿಗಳ ಹರ್ಷೋದ್ಗಾರ - ವಿಡಿಯೋ