ದೇಸಿ ತಳಿಯ ನಾಯಿಗಳನ್ನು ದತ್ತು ಪಡೆಯಿರಿ: ತ್ರಿಷಿಕಾ ಕುಮಾರಿ ಒಡೆಯರ್ - ಮೈಸೂರು ನ್ಯೂಸ್
ಮೈಸೂರು:ನಗರದ ಬೋಗಾದಿಯಲ್ಲಿರುವ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ)ನಲ್ಲಿ ವಿಕಲಾಂಗ ನಾಯಿಗಳಿಗೆಂದೇ ಪ್ರತ್ಯೇಕವಾಗಿ ನಿರ್ಮಿಸಿರುವ ವಿಭಾಗವನ್ನು ರಾಜ ವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ನಿನ್ನೆ (ಸೋಮವಾರ) ಉದ್ಘಾಟಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ವಿದೇಶಿ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಬದಲು ದೇಸಿ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು. ವಿದೇಶಿ ನಾಯಿಗಳಿಗೆ ಹೋಲಿಸಿದರೆ ದೇಸಿ ನಾಯಿಗಳು ನಮ್ಮ ಪರಿಸ್ಥಿತಿಗೆ ಹೆಚ್ಚು ಹೊಂದಿಕೊಳ್ಳುತ್ತವೆ. ಅಲ್ಲದೇ ಈ ವಾತಾವರಣಕ್ಕೆ ಸೂಕ್ತವಾದವು. ಅಪಘಾತದಿಂದಲೋ, ಹುಟ್ಟಿನಿಂದಲೋ ವಿಕಲಾಂಗರಾಗಿ ನಿರ್ಲಕ್ಷ್ಯಕ್ಕೆ ಒಳಗಾಗುವ ನಾಯಿಗಳನ್ನು ಆರೈಕೆ ಮಾಡಬೇಕು. ಯಾರೂ ಇಂತಹ ನಾಯಿಗಳನ್ನು ಕಡೆಗಣಿಸಬಾರದು ಎಂದು ಹೇಳಿದರು.
ಡಾ.ಡಿ.ಎಲ್ ಮಾಧವಿ ಅವರು ವಿಭಾಗ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು, ಪರಿತ್ಯಕ್ತ ಅಥವಾ ನಿರ್ಲಕ್ಷಿಸಲ್ಪಟ್ಟ ಪ್ರಾಣಿಗಳಿಗೆ ಪ್ರೀತಿಯಿಂದ ಆರೈಕೆ ಮಾಡಲಾಗುತ್ತದೆ. ಅಂಗವಿಕಲ ನಾಯಿಗಳಿಗಾಗಿ ಶಾಶ್ವತ ಸ್ಥಳ ಮತ್ತು ವೈದ್ಯಕೀಯ ಸಹಾಯ ಒದಗಿಸುತ್ತದೆ. ಅಪಘಾತ, ಮಾನವ ಕ್ರೌರ್ಯ, ಜನ್ಮಜಾತ ಕಾಯಿಲೆಗಳಿಂದ ಅಂಗವಿಕಲವಾದ ನಾಯಿಗಳನ್ನು ಉಪಚರಿಸುವುದೇ ಇದರ ಉದ್ದೇಶವಾಗಿದೆ.
ಇದನ್ನೂ ಓದಿ:ರಾಣಿ ತ್ರಿಷಿಕಾ ಕುಮಾರಿ ಕ್ರಿಕೆಟ್ ಕ್ರೇಜ್.. ಬ್ಯಾಟಿಂಗ್ ಮಾಡಿ ಪಂದ್ಯ ಉದ್ಘಾಟಿಸಿದ ವಿಡಿಯೋ ವೈರಲ್