ನಟ ಸುದೀಪ್ ಚುನಾವಣೆ ಪ್ರಚಾರ: ಅಭಿಮಾನಿಗಳ ನೂಕುನುಗ್ಗಲು, ಪೊಲೀಸರಿಂದ ಲಘು ಲಾಠಿ ಪ್ರಹಾರ - ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಶಿವನಗೌಡ ನಾಯಕ
ರಾಯಚೂರು: ವಿಧಾನಸಭಾ ಚುನಾವಣೆ ಪ್ರಚಾರ ಹಿನ್ನೆಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣಕ್ಕೆ ಆಗಮಿಸಿದ್ದರು. ದೇವದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಶಿವನಗೌಡ ನಾಯಕ ಪರವಾಗಿ ನಟ ಕಿಚ್ಚ ಸುದೀಪ್ ರೋಡ್ ಶೋ ಮಾಡಿದರು. ಈ ವೇಳೆ, ಸುದೀಪ್ ನೋಡಲು ಬಂದ ಅಭಿಮಾನಿಗಳು ಬ್ಯಾರಿಕೇಡ್ ಮುರಿದು ನುಗ್ಗಲು ಮುಂದಾಗಿದ್ದು, ಪೊಲೀಸರು ಲಾಠಿ ಚಾರ್ಚ್ ಪ್ರಯೋಗಿಸಿದ್ದಾರೆ.
ಸುದೀಪ್ ಅವರು ಕಲಬುರಗಿಯಿಂದ ದೇವದುರ್ಗಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ. ಈ ವೇಳೆ, ಸುದೀಪ್ ಅವರನ್ನು ನೋಡಲು ಬ್ಯಾರಿಕೇಡ್ ಮುರಿದು ಅಭಿಮಾನಿಗಳು ನುಗ್ಗಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಹೆಲಿಕಾಪ್ಟರ್ ಬಂದ ಕೂಡಲೇ ಅಭಿಮಾನಿಗಳು ಸುದೀಪ್ ನೋಡಲು ಓಡಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.
ನಿನ್ನೆಯಷ್ಟೇ ನಟ ಯಾದಗಿರಿ ಜಿಲ್ಲೆಗೆ ಆಗಮಿಸಿ ಶಹಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೀನ್‌ರೆಡ್ಡಿ ಪಾಟೀಲ್ ಯಾಳಗಿ ಪರ ಭರ್ಜರಿ ರೋಡ್ ಶೋ ನಡೆಸಿದ್ದರು. ಜನಸಾಗರದ ಮಧ್ಯೆಯೇ ಸುದೀಪ್ ಅಬ್ಬರದ ಪ್ರಚಾರ ನಡೆಸಿದ್ದರು. ತಮ್ಮ ನೆಚ್ಚಿನ ನಟ ಸುದೀಪ್ ಅವರನ್ನು ಕಣ್ಮುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.
ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿ ಅಮೀನ್‌ರೆಡ್ಡಿ ಪರ ನಟ ಸುದೀಪ್ ಅಬ್ಬರದ ಪ್ರಚಾರ