ಹ್ಯಾಟ್ರಿಕ್ ಹೀರೋ ಶಿವಣ್ಣ ಭರ್ಜರಿ ರೋಡ್ ಶೋ : ಲಕ್ಷ್ಮೀ ಹೆಬ್ಬಾಳ್ಕರ್ ಪರ ಪ್ರಚಾರ - ಈಟಿವಿ ಭಾರತ ಕನ್ನಡ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಪರ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಇಂದು ಭರ್ಜರಿ ಪ್ರಚಾರ ನಡೆಸಿದರು. ಗ್ರಾಮೀಣ ಕ್ಷೇತ್ರದ ಸುಳೇಭಾವಿಯ ಶ್ರೀ ಲಕ್ಷ್ಮೀ ದೇವಿ ಮಂದಿರಕ್ಕೆ ಆಗಮಿಸಿದ ಚಿತ್ರನಟ ಡಾ. ಶಿವರಾಜಕುಮಾರ್ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಗೀತಾ ಶಿವರಾಜಕುಮಾರ್, ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ದೇವಸ್ಥಾನದ ಆವರಣದ ಹೊರಗೆ ಹಾಡು ಹಾಡಿ ಅಭಿಮಾನಿಗಳನ್ನು ರಂಜಿಸಿದರು.
ಬಳಿಕ ದೇವಾಲಯದಲ್ಲಿಂದ ಹೊನ್ನಿಹಾಳದವರೆಗೂ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಶಿವಣ್ಣ ಲಕ್ಷ್ಮೀ ಹೆಬ್ಬಾಳ್ಕರ್ ಪರ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ನಿಮ್ಮ ಮನೆ ಮಗಳು. ಇಷ್ಟು ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ. ಮತ್ತೊಮ್ಮೆ ಅವರನ್ನು ಆರಿಸಿ ತಂದರೆ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲಿದ್ದಾರೆ. ಅವರಿಗೆ ಆಶೀರ್ವಾದ ಮಾಡುವಂತೆ ಕೇಳಿಕೊಂಡರು.
ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್, ಹ್ಯಾಟ್ರಿಕ್ ಹೀರೋ, ಶಿವರಾಜಕುಮಾರ್ ಅಣ್ಣನವರು ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ. ಅಲ್ಲದೇ ಇಲ್ಲಿ ಅವರಿಗಾಗಿ ದೊಡ್ಡ ಅಭಿಮಾನಿ ಬಳಗ ಕಾಯುತ್ತಿರುವುದು ನೋಡಿ ಹೆಮ್ಮೆ ಎನಿಸುತ್ತಿದೆ ಎಂದರು. ಈ ವೇಳೆ ಶಿವಣ್ಣ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪರ ಅಭಿಮಾನಿಗಳು ಜಯಘೋಷ ಕೂಗಿದರು. ರೋಡ್ ಶೋ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.
ಇದನ್ನೂ ಓದಿ :ಬೆಣ್ಣೆನಗರಿಯಲ್ಲಿ ನಟ ದರ್ಶನ್ ಭರ್ಜರಿ ರೋಡ್ ಶೋ, ರೇಣುಕಾಚಾರ್ಯ ಪರ ಮತಯಾಚನೆ