ಬೈಕ್ನಲ್ಲಿ ಬಂದು ಮಾರಕಾಸ್ತ್ರ ತೋರಿಸಿ ಸರಣಿ ಸುಲಿಗೆ ಮಾಡಿದ ದುಷ್ಕರ್ಮಿಗಳು
Published : Nov 22, 2023, 6:25 PM IST
ಬೆಂಗಳೂರು :ನಗರದಲ್ಲಿ ಮಚ್ಚು ಹಿಡಿದು ರಾತ್ರೋರಾತ್ರಿ ಅಂಗಡಿಗಳಿಗೆ ನುಗ್ಗಿ ಹಣ ಸುಲಿಗೆ ಮಾಡುವ ಘಟನೆಗಳು ಅಧಿಕವಾಗುತ್ತಿವೆ. ನಿನ್ನೆ ರಾತ್ರಿ ಆರ್ ಟಿ ನಗರ ಹಾಗೂ ಡಿ ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಡಿಗಳಿಗೆ ನುಗ್ಗಿದ ಸುಲಿಗೆಕೋರರು ಮಾರಕಾಸ್ತ್ರ ತೋರಿಸಿ, ಬೆದರಿಸಿ ಸರಣಿ ಹಣ ಸುಲಿಗೆ ಮಾಡಿದ್ದಾರೆ.
ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಿನ್ನೂರು ಮುಖ್ಯರಸ್ತೆಯಲ್ಲಿ ನೇಚರ್ ಬಾರ್ ಅಂಡ್ ರೆಸ್ಟೋರೆಂಟ್ಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಸುಮಾರು 40 ಸಾವಿರ ರೂಪಾಯಿವರೆಗೂ ಸುಲಿಗೆ ಮಾಡಿದ್ದಾರೆ. ಬಳಿಕ ಅದೇ ದಾರಿಯಲ್ಲಿ ಬರುವಾಗ ಬಿಡಾ ಅಂಗಡಿ ಮಾಲೀಕನಿಗೆ ಹಣ ನೀಡುವಂತೆ ಬೆದರಿಸಿದ್ದಾರೆ. ಇದಕ್ಕೆ ನಿರಾಕರಿಸಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಟೀ ಇಲ್ಲ ಅಂದಿದ್ದಕ್ಕೆ ಅಂಗಡಿ ಗಾಜು ಪುಡಿ-ಪುಡಿ ಮಾಡಿದ್ದಾರೆ.
ಮೂರು ಬೈಕ್ಗಳಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರ ಹಿಡಿದು ಓಡಾಡಿದ್ದಾರೆ. ಆರ್. ಟಿ ನಗರ ಠಾಣಾ ವ್ಯಾಪ್ತಿಯಲ್ಲಿರುವ ಬಾರ್ಗೆ ನುಗ್ಗುವ ಮುನ್ನ ಡಿ ಜೆ ಹಳ್ಳಿ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯಕ್ಕೆ ನಿನ್ನೆ ರಾತ್ರಿ ಹೋಗಿದ್ದ ಆರೋಪಿಗಳು ಟೀ ಕೇಳಿದ್ದಾರೆ. ಅಂಗಡಿ ಮುಚ್ಚುವ ಸಮಯವಾಗಿದ್ದರಿಂದ ಟೀ ಇಲ್ಲ ಎಂದು ಮಾಲೀಕ ಹೇಳಿದ್ದಾರೆ. ಇಷ್ಟಕ್ಕೆ ಆಕ್ರೋಶಗೊಂಡ ಆರೋಪಿಗಳ ಗುಂಪು ಏಕಾಏಕಿ ಮಾರಕಾಸ್ತ್ರಗಳಿಂದ ಅಂಗಡಿಯ ಗಾಜು ಧ್ವಂಸ ಮಾಡಿದ್ದಾರೆ.
ಡಿ ಜೆ ಹಳ್ಳಿ ಠಾಣೆ ರೌಡಿ ಇಮ್ರಾನ್ ಹಾಗೂ ಆತನ ಸಹಚರರು ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳು ಪುಂಡಾಟ ಮೆರೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರ್ ಟಿ ನಗರ ಎರಡು ಹಾಗೂ ಡಿ ಜೆ ಹಳ್ಳಿಯಲ್ಲಿ ಒಂದು ಸೇರಿದಂತೆ ಪ್ರತ್ಯೇಕ ಒಟ್ಟು ಮೂರು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಸತ್ತಂತೆ ಬಿಂಬಿಸಿಕೊಂಡು ತಲೆಮರೆಸಿಕೊಂಡಿದ್ದ ರೌಡಿ ಕೊನೆಗೂ ಅರೆಸ್ಟ್