Heavy rain: ದೆಹಲಿಯಲ್ಲಿ ಎದೆ ಮಟ್ಟದ ನೀರಿನಲ್ಲೇ ಸೈಕಲ್ ರಿಕ್ಷಾ ಚಾಲನೆ - ವಿಡಿಯೋ - ಯಮುನಾ ನದಿ ಅಪಾಯ ಮಟ್ಟ
ನವದೆಹಲಿ : ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಭಾರತ ಅಕ್ಷರಶಃ ನಲುಗಿ ಹೋಗಿದೆ. ಭಾರಿ ಮಳೆಯಿಂದಾಗಿ ಪಂಜಾಬ್, ದೆಹಲಿ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಹರಿಯಾಣದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಭೂ ಕುಸಿತ, ಪ್ರವಾಹದಿಂದಾಗಿ ಜನರು ಪರದಾಡುವಂತಾಗಿದೆ.
ದೆಹಲಿಯಲ್ಲೂ ಭಾರಿ ಮಳೆಯಾಗಿದ್ದು, ಇಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುತ್ತಿದ್ದಾರೆ. ರಾಷ್ಟ್ರ ರಾಜಧಾನಿ ಭಾರಿ ಮಳೆಗೆ ಕೆರೆಯಂತಾಗಿದ್ದು, ಹಲವೆಡೆ ಕೃತಕ ನೆರೆ ಉಂಟಾಗಿ ರಸ್ತೆಯಲ್ಲಿ ನೀರು ನಿಂತಿದೆ. ದೆಹಲಿಯ ಕೆಂಪುಕೋಟೆ ರಸ್ತೆಯಲ್ಲಿ ನಿಂತ ನೀರಿನಲ್ಲಿ ವ್ಯಕ್ತಿಯೊಬ್ಬ ಸೈಕಲ್ ರಿಕ್ಷಾವನ್ನು ತುಳಿದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಈ ದೃಶ್ಯದಲ್ಲಿ, ವ್ಯಕ್ತಿಯ ಎದೆವರೆಗೂ ನೀರು ನಿಂತಿದ್ದರೂ ಅದನ್ನು ಲೆಕ್ಕಿಸದೇ ಸೈಕಲ್ ರಿಕ್ಷಾವನ್ನು ತುಳಿದುಕೊಂಡು ಹೋಗಿದ್ದಾನೆ.
ಭಾರಿ ಮಳೆ ಹಿನ್ನೆಲೆ ದೆಹಲಿಯ ಯಮುನಾ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದೆ. ಈ ಸಂಬಂಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಗ್ಗು ಪ್ರದೇಶಗಳಲ್ಲಿರುವ ಜನರು ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ದೆಹಲಿಯ ಹಲವು ಪ್ರದೇಶಗಳು ಜಲಾವೃತವಾಗಿವೆ.
ಇದನ್ನೂ ಓದಿ : ಎನ್‌ಎಚ್‌ಪಿಸಿ ಚಿರ್ಕಿಲಾ ಅಣೆಕಟ್ಟೆಯಿಂದ ನೀರು ಬಿಡುಗಡೆ.. ಧೌಲಿ-ಕಾಳಿ ನದಿಗಳ ನೀರಿನ ಮಟ್ಟ ಹೆಚ್ಚಳ