ಎತ್ತಿನ ಬಂಡಿಗೆ ಲಾರಿ ಡಿಕ್ಕಿ.. ಸ್ಥಳದಲ್ಲೇ ಎತ್ತುಗಳು ಸಾವು : ಪ್ರಾಣಾಪಾಯದಿಂದ ಪಾರಾದ ರೈತ - Etv Bharat Kannada
ಮಂಡ್ಯ: ಎತ್ತಿನ ಬಂಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಾಂಡವಪುರ ತಾಲೂಕಿನ ಬನ್ನಘಟ್ಟ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣೇಗೌಡ ಎಂಬುವವರಿಗೆ ಸೇರಿದ ಎತ್ತುಗಳು ಅಪಘಾತದಲ್ಲಿ ಮೃತ ಪಟ್ಟಿವೆ. ಜಮೀನಿಗೆ ತೆರಳುತ್ತಿದ್ದ ವೇಳೆ ಎತ್ತಿನಗಾಡಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಎತ್ತಿನ ಬಂಡಿಯಲ್ಲಿದ್ದ ರೈತ ಕೃಷ್ಣೇಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಾಸಕ ಸಿಎಸ್ ಪುಟ್ಟರಾಜು ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿ 20 ಸಾವಿರ ವೈಯಕ್ತಿಕ ಪರಿಹಾರ ನೀಡಿದ್ದಾರೆ. ಬಳಿಕ ಲಾರಿ ಮಾಲೀಕನಿಗೆ ಕರೆ ಮಾಡಿ ರೈತನಿಗೆ 2 ಲಕ್ಷ ಪರಿಹಾರ ನೀಡುವಂತೆ ತಾಕೀತು ಮಾಡಿ ಪರಿಹಾರ ಕೊಟ್ಟು ಲಾರಿ ತೆಗೆದುಕೊಂಡು ಹೋಗಲು ಸೂಚಿಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಸ್ತೆ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಲಕ್ಷ್ಮಣ ಸವದಿ