ಮಹಿಳೆಗೆ ಡಿಕ್ಕಿ ಹೊಡೆದು ಆಕೆಯ ಮೇಲೆ ಹರಿದ ಸರ್ಕಾರಿ ಬಸ್: ಸ್ಥಳದಲ್ಲೇ ಸಾವು, ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬೆಂಗಳೂರಿನ ಪೂಜಾ ಭಾರತಿ
Published : Dec 11, 2023, 1:35 PM IST
ಮಂಡ್ಯ:ಚಾಲಕನ ಅಜಾಗರೂಕತೆಯಿಂದ ಕೆಎಸ್ಆರ್ಟಿಸಿ ಬಸ್ ಮಹಿಳೆಗೆ ಡಿಕ್ಕಿ ಹೊಡೆದಿದೆ. ಬಸ್ಸು ಆಕೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬಸ್ನ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲೇ ದಾರುಣವಾಗಿ ಕೊನೆ ಉಸಿರೆಳೆದಿದ್ದಾಳೆ. ಬೆಂಗಳೂರಿನ ಪೂಜಾ ಭಾರತಿ (40) ಮೃತ ಮಹಿಳೆ. ಘಟನೆಯ ಭೀಕರ ದೃಶ್ಯ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಹಿಳೆ ತನ್ನ ಪಾಡಿಗೆ ಬಸ್ಸು ನಿಲ್ದಾಣದ ಒಳಗೆ ಪ್ರವೇಶ ಮಾಡುತ್ತಿದ್ದಳು. ಈ ವೇಳೆ ಹಿಂದಿನಿಂದ ನಿಲ್ದಾಣದ ಒಳಗೆ ಪ್ರವೇಶಿಸಿದ ಬಸ್ ನಿಯಂತ್ರಣ ತಪ್ಪಿ ಮುಂದಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಆಕೆಯ ಮೇಲೆ ಹರಿದಿದೆ. ಪರಿಣಾಮ ಆಕೆಯ ಒಂದು ಕಾಲು ಪುಡಿಪುಡಿಯಾಗಿದ್ದು ಮಹಿಳೆಯ ಪ್ರಾಣ ಚೆಲ್ಲಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತ ದೇಹವನ್ನು ಮಂಡ್ಯ ಮಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸದ್ಯ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಭಯಾನಕ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿರುವುದರಿಂದ ಬಸ್ ಚಾಲಕನೇ ವೇಗವಾಗಿ ಬಂದು ಗುದ್ದಿರುವುದು ಸ್ಪಷ್ಟವಾಗಿದೆ.