ತಮಿಳುನಾಡಿನಲ್ಲಿ ಪ್ರವಾಹದ ಅಬ್ಬರ: 39 ಗಂಟೆಗಳವರೆಗೆ ಮರದ ಮೇಲೆ ಹತ್ತಿ ಕುಳಿತಿದ್ದ ರೈತನ ರಕ್ಷಣೆ - ಭಾರಿ ಮಳೆ
Published : Dec 20, 2023, 1:38 PM IST
ತಿರುನಲ್ವೇಲಿ (ತಮಿಳುನಾಡು):ತಿರುನಲ್ವೇಲಿಯಲ್ಲಿ ಭೀಕರ ಪ್ರವಾಹ ಎದುರಾಗಿದೆ. ಈ ವೇಳೆ, ರೈತನೊಬ್ಬ 39 ಗಂಟೆಗಳ ಕಾಲ ಮರದ ಕೊಂಬೆಯ ಮೇಲೆ ಹತ್ತಿ ಕುಳಿತು ಕೊಂಡಿದ್ದನು. ಎಸ್‌ಡಿಪಿಐ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿ, ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 72 ವರ್ಷದ ರೈತನನ್ನು ರಕ್ಷಣೆ ಮಾಡಿದೆ.
ತಿರುನೆಲ್ವೇಲಿ ಜಿಲ್ಲೆಯ ಪಥಮಡೈ ಸಮೀಪದ ಕೊಲುಮಡೈ ಗ್ರಾಮದ ಚೆಲ್ಲಯ್ಯ (72) ತೋಟದಲ್ಲಿ ಮನೆ ಮಾಡಿಕೊಂಡಿದ್ದರು. ಅವರು 20ಕ್ಕೂ ಹೆಚ್ಚು ಮೇಕೆಗಳನ್ನು ಸಾಕಿಕೊಂಡು ಕೃಷಿ ಮಾಡುತ್ತಿದ್ದಾರೆ. ಕಳೆದ ಡಿಸೆಂಬರ್ 17ರಂದು ಅತಿವೃಷ್ಟಿಯಿಂದ ಕಾಲುವೆ ಒಡೆದು ಅವರ ತೋಟಕ್ಕೆ ನೀರು ನುಗ್ಗಿತ್ತು. ಅಲ್ಲದೇ ಸಾಕಿದ ಮೇಕೆಗಳು ಅವರ ಕಣ್ಣೆದುರೇ ಪ್ರವಾಹಕ್ಕೆ ಕೊಚ್ಚಿ ಹೋಗಿರುವುದನ್ನು ಕಂಡು ಭಯಗೊಂಡಿದ್ದರು. ಇದಾದ ನಂತರ ತೋಟದಲ್ಲಿ ವಿಪರೀತ ನೀರು ಹರಿಯುತ್ತಿರುವುದರಿಂದ ಏನು ಮಾಡಬೇಕು ಎಂದು ತೋಚದೇ ತೋಟದ ಮನೆ ಪಕ್ಕದಲ್ಲಿದ್ದ ಮರದ ಮೇಲೆ ಕುಳಿತುಕೊಂಡಿದ್ದಾರೆ. ಸುಮಾರು 39 ಗಂಟೆಗಳ ಕಾಲ ಹಗಲು, ರಾತ್ರಿ ನಿದ್ದೆ, ಊಟವಿಲ್ಲದೇ ರೈತ ನರಳುತ್ತಿದ್ದ. ಈ ಸಂಬಂಧ ಅವರ ಪುತ್ರ ನೀಡಿದ ಮಾಹಿತಿ ಮೇರೆಗೆ, ಎಸ್‌ಡಿಪಿಐ ತಂಡವು ಆ ರೈತನನ್ನು ರಕ್ಷಣೆ ಮಾಡಿದೆ.
ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ವಿಶೇಷವಾಗಿ ತಿರುನಲ್ವೇಲಿ, ತೆಂಕಶಿ, ಕನ್ಯಾಕುಮಾರಿ ಮತ್ತು ಟುಟಿಕೋರಿನ್ ಜಿಲ್ಲೆಗಳಲ್ಲಿ ನಿರಂತರ ಅತಿ ಹೆಚ್ಚು ಮಳೆ ಸುರಿಯುತ್ತಿದೆ. ಪರಿಣಾಮ ಈ ಜಿಲ್ಲೆಗಳ ಎಲ್ಲ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಜನವಸತಿ ಪ್ರದೇಶಗಳಿಗೆ ಜಲಾವೃತಗೊಂಡಿವೆ. ಈ ಜಿಲ್ಲೆಗಳಲ್ಲಿ ಮಳೆ ಮತ್ತು ಪ್ರವಾಹದಿಂದ ಅಪಾರ ಹಾನಿ ಸಂಭವಿಸಿದ್ದು, ಪರಿಹಾರ ಕಾರ್ಯಗಳು ಚುರುಕುಗೊಂಡಿವೆ.
ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆ ರೈಲು ಸಂಚಾರ ಆರಂಭ:ಮಳೆ ಅಬ್ಬರ ಕಡಿಮೆಯಾಗುತ್ತಿರುವುದಿಂದ ತಮಿಳುನಾಡಿನ ದಕ್ಷಿಣ ಜಿಲ್ಲೆಗಳ ಕೆಲವು ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ವರುಣನ ಅಬ್ಬರ ತಗ್ಗಿದ್ದರಿಂದ ನೆಲ್ಲೈ ಜಂಕ್ಷನ್ ರೈಲು ನಿಲ್ದಾಣದಲ್ಲಿ ಸಂಚಾರ ಮಾಡುವ ಎಲ್ಲ ರೈಲುಗಳನ್ನು ಪುನರಾರಂಭಿಸಲಾಯಿತು. ಇಂದು (ಡಿ.20) ಬೆಳಗಿನ ಜಾವದಿಂದಲೇ ನೆಲ್ಲೈ ನಿಲ್ದಾಣದಿಂದ ರೈಲು ಸಂಚಾರ ಆರಂಭವಾಗಿದೆ. ದಕ್ಷಿಣ ಮಾರ್ಗದಲ್ಲಿ ಮಧುರೈನಿಂದ ರೈಲುಗಳು ಬೆಳಗ್ಗೆ ಬರಲಾರಂಭಿಸಿದವು. ಇಂದು ಬೆಳಗ್ಗೆ ಚೆನ್ನೈ-ನೆಲ್ಲಿ ಎಕ್ಸ್‌ಪ್ರೆಸ್ ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣವನ್ನು ತಲುಪಿತು.
ನಾಗರಕೋಯಿಲ್ನಿಂದ ಮುಂಬೈಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 7.30ಕ್ಕೆ ರೈಲು ನಿಲ್ದಾಣಕ್ಕೆ ಬಂದಿತ್ತು. ಜೊತೆಗೆ ಅಂಚೆ ಮತ್ತು ಪಾರ್ಸೆಲ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ತೆಂಕಶಿ, ರಾಜಪಾಳ್ಯಂ ಮತ್ತು ವಿರುದುನಗರ ರೈಲುಗಳು ಎಂದಿನಂತೆ ಸಂಚರಿಸಲಿವೆ ಎಂದು ದಕ್ಷಿಣ ರೈಲ್ವೆ ಪ್ರಕಟಿಸಿದೆ.
ಇದನ್ನೂ ಓದಿ:ಕಾವೇರಿ ನೀರು ಹಂಚಿಕೆ: ಜನವರಿ ಕೊನೆಯವರೆಗೆ ನಿತ್ಯ 1030 ಕ್ಯೂಸೆಕ್ ನೀರು ಹರಿಸುವಂತೆ ಶಿಫಾರಸು