ದಾಳಿ ಮಾಡಿದ ಚಿರತೆ ಜೊತೆ ಹೋರಾಡಿ ಪ್ರಾಣ ಉಳಿಸಿಕೊಂಡ ಶ್ವಾನ: ವಿಡಿಯೋ
Published : Sep 8, 2023, 8:22 PM IST
ದಾವಣಗೆರೆ:ನಾಯಿ ಮೇಲೆ ಚಿರತೆ ದಾಳಿ ನಡೆಸಿದ್ದು, ಶ್ವಾನವು ಹರಸಾಹಸಪಟ್ಟು ತಪ್ಪಿಸಿಕೊಂಡು ಓಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಜಿ ಟಿ ಕಟ್ಟೆ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲ ದಿನಗಳಿಂದ ಜಿ.ಟಿ ಕಟ್ಟೆ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದೀಗ ಗುರುವಾರ ರಾತ್ರಿ ನಾಯಿ ಮೇಲೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದ್ದು, ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನ್ಯಾಮತಿಯಲ್ಲಿ ಚಿರತೆ ಸೆರೆ:ಇನ್ನೊಂದೆಡೆ ದಾವಣಗೆರೆಯ ನ್ಯಾಮತಿ ತಾಲೂಕಿನ ಕೆಲ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ. ಹಲವು ಬಾರಿ ಕಾಣಿಸಿಕೊಂಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆ ಭಯದಿಂದ ಜನರು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಕಳೆದ ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಹಿಡಿಯಲು ಮಾದಾಪುರ ಗ್ರಾಮದಲ್ಲಿ ಬೋನ್ ಇರಿಸಿದ್ದರು. ನಾಯಿ ಹಿಡಿಯಲು ಬಂದ ಚಿರತೆ ಬೋನಿಗೆ ಬಿದ್ದಿದೆ. ಸದ್ಯ ಚಿರತೆ ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.