ಬೆಂಗಳೂರು: ನಡು ರಸ್ತೆಯಲ್ಲಿ ಚಲಿಸುತ್ತಿದ್ದ ಕ್ರೇನ್ ಅಗ್ನಿಗಾಹುತಿ... ವಿಡಿಯೋ - ಕ್ರೇನ್ ಬೆಂಕಿ
Published : Oct 3, 2023, 8:11 AM IST
ಬೆಂಗಳೂರು:ಚಲಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೃಹತ್ ಗಾತ್ರದ ಕ್ರೇನ್ ಹೊತ್ತಿ ಉರಿದ ಘಟನೆ ತಡರಾತ್ರಿ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ವರ್ತೂರಿನಿಂದ ಬಿಡದಿಗೆ ತೆರಳುತ್ತಿದ್ದ ಕ್ರೇನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಚಾಲಕ ವಾಹನವನ್ನು ನಿಧಾನಗೊಳಿಸಿದ. ಆದರೆ, ಬೆಂಕಿಯ ಜ್ವಾಲೆ ಹೆಚ್ಚಾಗಿ ನೋಡನೋಡುತ್ತಿದ್ದಂತೆ ರಸ್ತೆಯಲ್ಲಿ ಕ್ರೇನ್ ಧಗಧಗನೇ ಹೊತ್ತಿ ಉರಿದಿದೆ. ಯಲಚೇನಹಳ್ಳಿ ತಲುಪುವಾಗ ಕ್ರೇನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕ್ರೇನ್ ನಿಲ್ಲಿಸಿದ ಚಾಲಕ ಹಾಗೂ ಇಬ್ಬರು ಸಿಬ್ಬಂದಿ ಕ್ರೇನ್ನಿಂದ ಹೊರ ಬಂದಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಇಡೀ ಕ್ರೇನ್ ಹೊತ್ತಿ ಉರಿದಿದೆ. ಇನ್ನು ರಸ್ತೆಯ ಪಕ್ಕದಲ್ಲೇ ಎರಡು ಪೆಟ್ರೋಲ್ ಬಂಕ್ಗಳು ಇದ್ದುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದ ಸ್ವಲ್ಪ ಸಮಯ ರಸ್ತೆಯಲ್ಲಿ ವಾಹನಗಳನ್ನು ಸಂಚಾರವನ್ನು ನಿಲ್ಲಿಸಲಾಗಿತ್ತು. ಸದ್ಯ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ರೀತಿ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿರುವ ಘಟನೆ ಮಂಡ್ಯದ ಶ್ರೀ ರಂಗಪಟ್ಟಣ ತಾಲೂಕಿನ ಗೌಡಹಳ್ಳಿ ಗೇಟ್ ಬಳಿ ಸೆಪ್ಟೆಂಬರ್ 9 ರಂದು ನಡೆದಿತ್ತು.
ಇದನ್ನೂ ಓದಿ:ಚಲಿಸುತ್ತಿದ್ದ ಎಲೆಕ್ಟ್ರಿಕ್ ಕಾರು ಅಗ್ನಿಗಾಹುತಿ: ವಿಡಿಯೋ