ಕಾರವಾರದ ಬಳಿ ಕಂದಕಕ್ಕೆ ನುಗ್ಗಿದ ಬಸ್: 30ಕ್ಕೂ ಹೆಚ್ಚು ಕಾರ್ಮಿಕರು ಪಾರು - ನೌಕಾನೆಲೆ
Published : Jan 4, 2024, 12:29 PM IST
|Updated : Jan 4, 2024, 12:48 PM IST
ಕಾರವಾರ : ನೌಕಾನೆಲೆಗೆ ಗುತ್ತಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ನುಗ್ಗಿದ ಕಾರವಾರದ ಬಳಿ ಇಂದು ಮುಂಜಾನೆ ನಡೆದಿದೆ. ಘಟನೆಯಿಂದ ಚಾಲಕ ಸೇರಿದಂತೆ ಅನೇಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಬಸ್ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕಾರವಾರದಿಂದ ನೌಕಾನೆಲೆಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಸಂಕ್ರುಭಾಗ್ ಘಟ್ಟದಲ್ಲಿ ಆಳೆತ್ತರದ ತಗ್ಗಿಗೆ ಇಳಿದಿದೆ. ಮಳೆಯಿಂದ ಸ್ಕಿಡ್ ಆಗಿ ಘಟನೆ ಸಂಭವಿಸಿದೆ ಎನ್ನಲಾಗುತ್ತಿದ್ದು, ಚಾಲಕ ಬಡೇಸಾಬ್ ಮುಜಾವರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ, ಸುಮಾರು 5 ರಿಂದ 6 ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ 30ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರು ಪಾರಾಗಿದ್ದಾರೆ. ಗಾಯಗೊಂಡವರನ್ನು ಕ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕಾರವಾರ ಬಸ್ ಡಿಪೋ ಮ್ಯಾನೇಜರ್, ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಕಾರವಾರದ ಹಬ್ಬುವಾಡದಲ್ಲಿ ಎಕ್ಸೆಲ್ ತುಂಡಾದ ಪರಿಣಾಮ 50ಕ್ಕೂ ಅಧಿಕ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪಿತ್ತು.
ಇದನ್ನೂ ಓದಿ :ಚಿಕ್ಕಮಗಳೂರು; ಭೀಕರ ರಸ್ತೆ ಅಪಘಾತ, ಸಿಸಿಟಿವಿಯಲ್ಲಿ ದೃಶ್ಯ ಸೆರೆ