ವಿಡಿಯೋ: ಜೋಡಿ ಚಿರತೆ ಬೋನಿಗೆ ಬಿದ್ದ ಸ್ಥಳದಲ್ಲೇ ಮತ್ತೊಂದು 8 ತಿಂಗಳ ಚಿರತೆ ಮರಿ ಸೆರೆ
ಮೈಸೂರು: ಚಿರತೆ ಹಾವಳಿ ಹೆಚ್ಚಾಗಿದ್ದ ಟಿ. ನರಸೀಪುರ ತಾಲೂಕಿನ ಮುಸುವಿನ ಕೊಪ್ಪಲು ಗ್ರಾಮದಲ್ಲಿ ಇತ್ತೀಚೆಗೆ ಜೋಡಿ ಚಿರತೆ ಬೋನಿಗೆ ಬಿದ್ದ ಸ್ಥಳದಲ್ಲೇ ಕಳೆದ ರಾತ್ರಿ 8 ತಿಂಗಳ ಮರಿ ಚಿರತೆ ಆಹಾರ ಅರಸಿ ಬಂದು ದೊಡ್ಡ ಬೋನಿಗೆ ಬಿದ್ದಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರು ಹಾಗೂ ಸೊಸಲೆ ಹೋಬಳಿ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ನಾಲ್ಕು ಜನರನ್ನು ಬಲಿ ಪಡೆದಿರುವ ಶಂಕೆ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆ ಬೋನ್, ಕ್ಯಾಮೆರಾ ಹಾಗೂ ಸಿಬ್ಬಂದಿ ಬಳಸಿ ಚಿರತೆ ಸೆರೆಗೆ ಸತತ ಕಾರ್ಯಾಚರಣೆ ನಡೆಸುತ್ತಿದೆ.
ಇದೀಗ ತಂಡ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ ಆಗಿದೆ. ಕಳೆದ ಫೆಬ್ರವರಿ 10 ರಂದು ಮುಸುವಿನ ಕೊಪ್ಪಲಿನ ಬಳಿ ದೊಡ್ಡ ಬೋನ್ ಹಾಕಿ ಜೋಡಿ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಗ್ರಾಮಸ್ಥರು ರಾತ್ರಿಯೇ ಚಿರತೆ ಮರಿ ಬೋನಿಗೆ ಬಿದ್ದ ಸ್ಥಳಕ್ಕೆ ಆಗಮಿಸಿ ಚಿರತೆ ವೀಕ್ಷಿಸಿದರು. ಬೋನಿಗೆ ಬಿದ್ದ 8 ತಿಂಗಳ ಚಿರತೆ ಮರಿಯನ್ನು ಅರಣ್ಯ ಇಲಾಖೆಯವರು ಮೈಸೂರಿನ ಅರಣ್ಯ ಭವನಕ್ಕೆ ತಂದು, ಇಂದು ಬೆಳಗ್ಗೆ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಈ ಚಿರತೆ ಮರಿಗೆ ಮೈಕ್ರೋಚಿಪ್ ಅಳವಡಿಸಿ ಕಾಡಿಗೆ ಬಿಡಲಾಗುವುದು ಎಂದು ಡಿಸಿಎಫ್ ಬಸವರಾಜ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮೈಸೂರು: ಕರುವನ್ನು ಇರಿಸಲಾಗಿದ್ದ ಬೋನಿಗೆ ಬಿದ್ದ ಜೋಡಿ ಚಿರತೆ