ರಾಯರ 352ನೇ ಆರಾಧನಾ ಮಹೋತ್ಸವ : ಅದ್ಧೂರಿಯಾಗಿ ನಡೆಯುತ್ತಿರುವ ಪೂರ್ವಾರಾಧನೆ - sriguru raghavendra swami aradhana mahotsava
Published : Aug 31, 2023, 6:17 PM IST
ರಾಯಚೂರು:ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಅದ್ಧೂರಿಯಾಗಿ ನಡೆಯುತ್ತಿದೆ. ಶ್ರೀಮಠದಲ್ಲಿ ಆರಾಧನಾ ಮಹೋತ್ಸವ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಳಗ್ಗೆಯಿಂದಲೇ ರಾಯರ ಮೂಲ ಬೃಂದಾವನಕ್ಕೆ ಅಭಿಷೇಕ ಸೇರಿದಂತೆ ವಿವಿಧ ಪೂಜೆ ಕೈಂಕರ್ಯಗಳು ಜರುಗಿದವು. ಶ್ರೀರಾಘವೇಂದ್ರ ಸ್ವಾಮಿಗಳು ಅಶರೀರಾದ ಪೂರ್ವ ದಿನವಾದ ಈ ದಿನದಂದು ಪೂರ್ವಾರಾಧನೆ ನಡೆಯುತ್ತಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನೇರವೇರಿಸಲಾಗುತ್ತಿದೆ.
ಪೂರ್ವಾರಾಧನೆ ಅಂಗವಾಗಿ ತಮಿಳುನಾಡಿನ ಶ್ರೀ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂಧ್ರಪ್ರದೇಶದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ತರಲಾದ ಶೇಷ ವಸ್ತ್ರವನ್ನು ಶ್ರೀಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶೇಷ ವಸ್ತ್ರವನ್ನು ಸ್ವೀಕರಿಸಿ ರಾಯರಿಗೆ ಸಮರ್ಪಿಸಿದರು. ನಂತರ ಶ್ರೀಗಳು ಮಾತನಾಡಿ, ಶ್ರೀರಂಗಂ-ಅಹೋಬಲ ಕ್ಷೇತ್ರದಿಂದ ಶೇಷ ವಸ್ತ್ರ ಬಂದಿದ್ದು ಗುರುರಾಯರಿಗೆ ಸಮರ್ಪಣೆಯಾಗಿದೆ. ಶೇಷವಸ್ತ್ರದ ಮೂಲಕ ರಾಯರಿಗೆ ದೇವರು ಅನುಗ್ರಹಿಸಿದ್ದಾರೆ. ಅಹೋಬಲ ಕ್ಷೇತ್ರದ ನರಸಿಂಹಸ್ವಾಮಿ ಹಾಗೂ ಶ್ರೀರಂಗಂ ಕ್ಷೇತ್ರದಲ್ಲಿ ಶ್ರೀಮಠ ಅನನ್ಯ ಸಂಬಂಧ ಹೊಂದಿದೆ ಎಂದರು.
ಇಂದು ನಿರ್ಮಾಲ್ಯ ವಿಸರ್ಜನೆ, ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ ಪೂಜೆ ಜರುಗಿದವು. ಇದಾದ ನಂತರ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರಿಂದ ಮೂಲ ರಾಮದೇವರ ಪೂಜೆ ನೇರವೇರಿಸಲಾಯಿತು. ಸಂಜೆಯ ವೇಳೆ ಮಠದ ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಇಂದು ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವುದಕ್ಕೆ ಶ್ರೀಮಠದ ಪ್ರಾಂಗಣದಲ್ಲಿ ಭಕ್ತರ ದಂಡು ತುಂಬಿದೆ. ಮೂಲ ಬೃಂದಾವನ ಪೂಜೆ ಹಾಗೂ ರಾಮದೇವರ ಪೂಜೆ ವೀಕ್ಷಣೆಗಾಗಿ ಪ್ರಾಂಗಣದಲ್ಲಿ ನಾಲ್ಕು ಕಡೆ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ:ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ