ಸಪ್ತಪದಿ ಕಾರ್ಯಕ್ರಮ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿವಾಹವಾದ 33 ಜೋಡಿಗಳು
ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಶುಕ್ರವಾರ ಧಾರ್ಮಿಕ ದತ್ತಿ ಇಲಾಖೆ ಆಯೋಜಿಸಿದ ಸಪ್ತಪದಿ ಕಾರ್ಯಕ್ರಮದಲ್ಲಿ 33 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಧ್ಯಾಹ್ನ 12.15ಕ್ಕೆ ಶುಭ ಅಭಿಜಿನ್ ಲಗ್ನದಲ್ಲಿ ವಧು-ವರರು ಮಾಂಗಲ್ಯಧಾರಣೆ ಮಾಡಿದರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಸುಬ್ಬುಕೃಷ್ಣ ಶಾಸ್ತ್ರಿ ನೇತೃತ್ವದ ಆಗಮಿಕರ ತಂಡ ಶಾಸ್ತ್ರೋಕ್ತವಾಗಿ ವಿವಾಹ ಕಾರ್ಯಕ್ರಮ ನಡೆಸಿಕೊಟ್ಟರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹೆಚ್.ಅಪ್ಪಯ್ಯಣ್ಣ, ತೆಂಗು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೆಂಕಟೇಶ ಬಾಬು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ ಸೇರಿದಂತೆ ಗಣ್ಯರು ಹಾಗೂ ಅಧಿಕಾರಿಗಳು ನವಜೋಡಿಗಳಿಗೆ ಅಕ್ಷತೆ ಹಾಕಿ ಶುಭ ಹಾರೈಸಿದರು. ಆಂಧ್ರಪ್ರದೇಶದ ಮಡಕಶಿರಾ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆಯಿಂದ ನೋಂದಣಿ ಮಾಡಿಕೊಂಡಿದ್ದ ವಧು-ವರರು ದಾಂಪತ್ಯಕ್ಕೆ ಕಾಲಿರಿಸಿದರು.
ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ಸೇರಿ ಒಟ್ಟು 55 ಸಾವಿರ ಮೌಲ್ಯದ ತಾಳಿ, ಒಂದು ಜೊತೆ ಚಿನ್ನದ ಗುಂಡು, ಕಾಲುಂಗುರ ನೀಡಲಾಯಿತು. ವಧು-ವರನ ಕಡೆಯ ಸಂಬಂಧಿಕರಿಗೆ ದೇವಸ್ಥಾನದ ವತಿಯಿಂದ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. 33 ಜೋಡಿಗಳಲ್ಲಿ ಅಂಧ ಜೋಡಿಯೂ ದಾಂಪತ್ಯಕ್ಕೆ ಕಾಲಿರಿಸಿದ್ದು ಗಮನ ಸೆಳೆಯಿತು.
ಇದನ್ನೂ ಓದಿ:ಲಕ್ಷಕ್ಕೂ ಅಧಿಕ ಮಲ್ಲಿಗೆ ಚೆಂಡಿನಲ್ಲಿ ಶ್ರೀ ಮಂಗಳಾದೇವಿಗೆ ಶಯನೋತ್ಸವ ಶೃಂಗಾರ-ನೋಡಿ