Bus burnt: ರಸ್ತೆ ಅಪಘಾತದಿಂದ ಬಸ್ಗೆ ಬೆಂಕಿ ಹೊತ್ತಿಕೊಂಡು 25 ಪ್ರಯಾಣಿಕರು ಸಜೀವ ದಹನ.. 8 ಮಂದಿ ಪಾರಾಗಿದ್ದು ಹೇಗೆ? - ಬಸ್ ಡಿವೈಡರ್ ಡಿಕ್ಕಿ ಹೊಡೆದು ರಸ್ತೆಗೆ ಉರುಳಿ ಬಿದ್ದಿದೆ
ಬುಲ್ಧಾನ್(ಮಹಾರಾಷ್ಟ್ರ):ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಾಗ್ಪುರದಿಂದ ಪುಣೆಗೆ ಹೋಗುತ್ತಿದ್ದ ಖಾಸಗಿ ಬಸ್ ಡಿವೈಡರ್ ಡಿಕ್ಕಿ ಹೊಡೆದು ರಸ್ತೆಗೆ ಉರುಳಿ ಬಿದ್ದಿದೆ. ಬಳಿಕ ಡಿಸೇಲ್ ಸೋರಿಕೆಯಾಗಿ ಬಸ್ಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆಯಿದ್ದು, ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 33ರ ಪೈಕಿ 25 ಜನರು ಸಜೀವ ದಹನವಾಗಿದ್ದಾರೆ.
ಈ ಬಸ್ ಸಿಂಧಖೇಡ್ ರಾಜಾ ಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಬಸ್ ಸುಟ್ಟು ಕರಕಲಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ನಿದ್ದೆಗೆ ಜಾರಿದ್ದರಿಂದ ಹೆಚ್ಚಿನ ಪ್ರಾಣಹಾನಿ ಸಂಭವಿಸಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮೃತದೇಹಗಳ ರಾಶಿ: ಖಾಸಗಿ ಬಸ್ ಅಪಘಾತದ ಬಳಿಕ ಸ್ಥಳದಲ್ಲಿ ಮೃತದೇಹಗಳ ರಾಶಿ ರಾಶಿ ಬಿದ್ದಿತ್ತು. ಸಮೃದ್ಧಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ನಂತರ, ಸ್ಥಳೀಯ ಗ್ರಾಮಸ್ಥರು ಮತ್ತು ಆಡಳಿತವು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆದರೆ ಅಷ್ಟರೊಳಗೆ 25 ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಬಸ್ಸಿನಲ್ಲಿದ್ದ ಇತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಒಬ್ಬ ಚಾಲಕ ಸಾವು: ವಿದರ್ಭ ಟ್ರಾವೆಲ್ಸ್ ಬಸ್‌ನಲ್ಲಿ ಇಬ್ಬರು ಚಾಲಕರು ಇದ್ದರು. ಅವರಲ್ಲಿ ಒಬ್ಬರು ಬಸ್ ಅನ್ನು ಕಾರಂಜಿವರೆಗೆ ಓಡಿಸಿದ್ದರು. ಆಗ ಮತ್ತೊಬ್ಬ ಚಾಲಕ ಬಸ್ಸನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಸ್ ಸಿಂಧಖೇಡ್ ರಾಜಾ ಬಳಿಯ ಪಿಂಪಲ್ಖುಟಾ ತಲುಪಿದ ನಂತರ ಅಪಘಾತಕ್ಕೆ ಒಳಗಾಯಿತು. ಈ ಬಸ್‌ನಲ್ಲಿ ಚಾಲಕನೊಬ್ಬ ಸಾವನ್ನಪ್ಪಿದ್ದು, ಮತ್ತೊಬ್ಬ ಚಾಲಕ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಎಂಟು ಪ್ರಯಾಣಿಕರು ಸಾವಿನ ದವಡೆಯಿಂದ ಪಾರು: ಪೊಲೀಸರ ಮಾಹಿತಿ ಪ್ರಕಾರ ಬಸ್ ಮೊದಲು ಕಬ್ಬಿಣದ ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ಡಿವೈಡರ್ಗೆ ಗುದ್ದಿದೆ. ಈ ರಭಸಕ್ಕೆ ಬಸ್ ಪಲ್ಟಿಯಾಗಿ ಬಿದ್ದಿದೆ. ಬಳಿಕ ಬದುಕುಳಿದ ಪ್ರಯಾಣಿಕರು ಬಸ್ಸಿನ ಬಾಗಿಲು ಒದ್ದು ಮತ್ತು ಗಾಜುಗಳನ್ನು ಒಡೆದು ಹೊರಬಂದಿದ್ದಾರೆ.
ಓದಿ:Horrible Road Accident: ಚಲಿಸುತ್ತಿದ್ದ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ.. 25 ಜನ ಸಜೀವ ದಹನ