ಶಾರ್ಟ್ ಸರ್ಕ್ಯೂಟ್ : ಅಗ್ನಿ ಅವಘಡಕ್ಕೆ 20 ಎಕರೆ ಕಬ್ಬು, 150 ತೆಂಗು ಸುಟ್ಟು ಬೂದಿ
ಚಾಮರಾಜನಗರ : ಶಾರ್ಟ್ ಸರ್ಕ್ಯೂಟ್ನಿಂದ 20 ಎಕರೆಗೂ ಹೆಚ್ಚು ಕಬ್ಬು ಹಾಗೂ 150 ಕ್ಕೂ ಹೆಚ್ಚು ತೆಂಗಿನಸಸಿ ಬೆಂಕಿಗೆ ಆಹುತಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಲೊಕ್ಕನಹಳ್ಳಿ ಗ್ರಾಮದ ವೇಲುಸ್ವಾಮಿ, ರುಕ್ಮಿಣಿ, ಸತೀಶ್ ಕುಮಾರ್ ಎಂಬುವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಕಬ್ಬು ಬೆಳೆದು 17 ತಿಂಗಳಾಗಿದ್ದರೂ ಸಕ್ಕರೆ ಕಾರ್ಖಾನೆಯವರು ಕಟಾವು ಮಾಡದೇ ಇರುವುದರಿಂದ ಈ ದುರ್ಘಟನೆ ನಡೆದಿದೆ ಎಂಬುದು ರೈತರ ಆರೋಪ.
ಅಗ್ನಿ ಅವಘಡದಿಂದಾದ ನಷ್ಟಕ್ಕೆ ಸಕ್ಕರೆ ಕಾರ್ಖಾನೆಯವರೇ ಪರಿಹಾರ ಕೊಡಬೇಕು. ಚಾಮರಾಜನಗರ ಜಿಲ್ಲಾಧಿಕಾರಿ, ತಹಶೀಲ್ದಾರ್ ಸ್ಥಳಕ್ಕೆ ಆಗಮಿಸಿ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು, ಇಲ್ಲದಿದ್ದರೆ ಸ್ಥಳದಲ್ಲೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
'ಶಾರ್ಟ್ ಸರ್ಕ್ಯೂಟ್ನಿಂದಾಗಿ ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮಕ್ಕೆ ಸೇರಿದ 15 ರಿಂದ 20 ಎಕರೆವರೆಗೂ ಕಬ್ಬು ಹಾಗೂ ತೆಂಗಿನ ಸಸಿಯೂ ನಾಶವಾಗಿದೆ. ಮತ್ತು ಮೂರು ಸ್ಟ್ರಾಟರ್ಗಳು, ಡ್ರಿಪ್ ಪೈಪ್ಗಳು, ಸ್ಪಿಂಕ್ಲರ್ ಪೈಪ್, ಮೋಟಾರ್ ಕೇಬಲ್ಗಳೆಲ್ಲಾ ಸುಟ್ಟು ಹೋಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಇದಕ್ಕೆಲ್ಲಾ ಯಾರು ಕಾರಣ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರ? ಅಥವಾ ಕೆಇಬಿಯವರ?. ಕಾರ್ಖಾನೆಯವರು 17 ತಿಂಗಳಾದರೂ ಕಬ್ಬು ಕಟಾವ್ ಮಾಡಿಲ್ಲ. ಇದೇ ನಿಜವಾದ ಕಾರಣ. ಹೀಗಾಗಿ ಕಾರ್ಖಾನೆಯಿಂದ ಯಾರಾದರು ಬರಲಿ, ಏನಾದರೂ ಪರಿಹಾರ ಹೇಳಲಿ. ನಂತರ ನಾವು ಈ ಪ್ರತಿಭಟನೆಯನ್ನು ನಿಲ್ಲಿಸುತ್ತೇವೆ. ಈಗ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು. ಇನ್ನು ಒಂದು ವಾರದಲ್ಲಿ ಕಬ್ಬು ಕಟಾವ್ ಮಾಡಬೇಕು ಎಂದು' ರೈತ ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.
ಓದಿ :ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಕುಟುಂಬದ ಮೇಲೆ ಹಲ್ಲೆ, ದೂರು ದಾಖಲು