ಹಾವೇರಿ: ಆಟೋ ಚಾಲಕರು, ಮಾಲೀಕರಿಂದ ಶಂಕರ್ ನಾಗ್ ಜನ್ಮದಿನಾಚರಣೆ - ETV Bharat Karnataka
Published : Nov 10, 2023, 9:22 AM IST
ಹಾವೇರಿ: ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ದಿವಂಗತ ನಟ ಶಂಕರ್ ನಾಗ್ ಅವರ ಜನ್ಮದಿನವನ್ನು ಆಟೋ ಚಾಲಕರು, ಮಾಲೀಕರು ಆಚರಿಸಿದರು. ಆಟೋ ನಿಲ್ದಾಣವನ್ನು ಹಳದಿ, ಕೆಂಪು ಬಣ್ಣದ ಬಲೂನ್ ಹಾಗು ಬಾವುಟಗಳಿಂದ ಅಲಂಕರಿಸಲಾಗಿತ್ತು. ಶಂಕರ್ ನಾಗ್ ಭಾವಚಿತ್ರಗಳು ರಾರಾಜಿಸಿದವು.
ಹೊಸಮನಿ ಸಿದ್ದಪ್ಪ ವೃತ್ತದಿಂದ ಆರಂಭವಾದ ಶಂಕರ್ ನಾಗ್ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಕೇಂದ್ರನಿಲ್ದಾಣಕ್ಕೆ ಆಗಮಿಸಿದ ಆಟೋ ಚಾಲಕರು, ಮಾಲೀಕರು ಜೈಘೋಷ ಹಾಕಿ ನೆಚ್ಚಿನ ನಟನ ಹೆಸರಿನಲ್ಲಿ ಕೇಕ್ ಕತ್ತರಿಸಿದರು. ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಕಡಿಮೆ ವಯಸ್ಸಿನಲ್ಲಿ ಶಂಕರ್ ನಾಗ್ ಮೇರು ಸಾಧನೆ ಮಾಡಿದವರು. ಚಿತ್ರರಂಗ, ರಂಗಭೂಮಿ, ನಿರ್ದೇಶಕ, ನಿರ್ಮಾಪಕನಾಗಿ ಸಾಕಷ್ಟು ಚಿತ್ರಗಳನ್ನು ಕೊಟ್ಟಿದ್ದಾರೆ. ನಾಯಕನಾಗಿ ನಟಿಸಿದ ಆಟೋ ರಾಜ ಸಿನಿಮಾ ಆಟೋಚಾಲಕ ವೃತ್ತಿಗೆ ಹೆಮ್ಮೆ ತಂದುಕೊಟ್ಟಿತ್ತು. ಬೆಂಗಳೂರು ನಗರಕ್ಕೆ ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್ ವೇ ಸೇರಿದಂತೆ ಹಲವು ಕನಸುಗಳನ್ನು ಕಂಡಿದ್ದ ಶಂಕರ್ ನಾಗ್ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಅವರಿಗೆ ಮನವಿ ಸಹ ಸಲ್ಲಿಸಿದ್ದರು.
ಆದರೆ ಬೆಂಗಳೂರು ನಗರಕ್ಕೆ ಮೆಟ್ರೋ ಬರುವ ಮುನ್ನ ಶಂಕರ್ ನಾಗ್ ಆಕಾಲಿಕ ಸಾವನ್ನಪ್ಪಿದ್ದರು. ಇವರ ಸಮಾಧಿ ಜಾಗ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಸರ್ಕಾರ ಸಮಾಧಿಯನ್ನು ಸಂರಕ್ಷಿಸಿ ಅವಿಸ್ಮರಣೀಯ ತಾಣ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಇಂದು 'ಆಟೋರಾಜ' ಶಂಕರ್ ನಾಗ್ ಜನ್ಮದಿನ: ಅಭಿಮಾನಿಗಳ ಮನದಾಳದಲ್ಲಿ ಶಂಕ್ರಣ್ಣ ಸದಾ ಜೀವಂತ