'ಸ್ಪಂದನಾ ಇಲ್ಲದೇ ವಿಜಯ್ ಬದುಕಲ್ಲ ಎಂದಿದ್ದು ಕೇಳಿ ಕರುಳು ಹಿಂಡಿದಂತಾಯಿತು': ಹಿರಿಯ ನಟಿ ಜಯಮಾಲಾ ಭಾವುಕ - ಈಟಿವಿ ಭಾರತ ಕನ್ನಡ
ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಹಿರಿಯ ನಟಿ ಜಯಮಾಲಾ ಸಂತಾಪ ಸೂಚಿಸಿದ್ದಾರೆ. ಭಾವುಕರಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ವಿಜಯ ರಾಘವೇಂದ್ರ ಮತ್ತು ಸ್ಪಂದನಾರನ್ನು ನೋಡುವಾಗ ಆದರ್ಶ ದಂಪತಿ ಎನಿಸುತ್ತಿತ್ತು. ಅವರಂತೆಯೇ ಅವರು ಜೀವನ ನಡೆಸಿದರು. ಯಾಕೆಂದರೆ ಅವರಿಬ್ಬರ ನಡುವೆ ಅಷ್ಟೊಂದು ಅನ್ಯೋನ್ಯತೆ ಮತ್ತು ಪ್ರೀತಿ ಇತ್ತು" ಎಂದು ಸ್ಪಂದನಾ ವಿಜಯ್ ಸುಂದರ ದಾಂಪತ್ಯದ ಬಗ್ಗೆ ತಿಳಿಸಿದರು.
ಮುಂದುವರೆದು, "ನಾನು ಸ್ಪಂದನಾ ತಾಯಿಯಲ್ಲಿ ಮಾತನಾಡುವಾಗ ಅವರು ಹೇಳಿದ್ದು, ನನ್ನ ಮಗಳು ಹೋಗಿದ್ದಲ್ಲ, ಅವಳಿಲ್ಲದೇ ರಾಘು ಹೇಗೆ ಬದುಕುತ್ತಾನೆ ಎಂದು. ಸ್ಪಂದನಾ ಇಲ್ಲದೇ ವಿಜಯ ರಾಘವೇಂದ್ರ ಬದುಕಲ್ಲ ಎಂದು ಅವರು ಹೇಳಿದ್ದು ಕೇಳಿ ನನಗೆ ಕರುಳು ಹಿಂಡಿದಂತಾಯಿತು. ದೇವರಿಗೆ ತುಂಬಾ ಒಳ್ಳೆಯವರೇ ಬೇಗ ಇಷ್ಟ ಆಗ್ತಾನೆ ಅನಿಸುತ್ತೆ" ಎಂದು ಭಾವುಕರಾದರು.
"ಯಾರಿಗೂ ಯಾವತ್ತೂ ಆ ಮಗು ತೊಂದರೆ ಕೊಟ್ಟಿಲ್ಲ. ತುಂಬಾ ಒಳ್ಳೆ ಹೆಣ್ಣು ಮಗಳು ಆಕೆ. ಚಂದದ ಕುಟುಂಬ, ಸುಂದರ ದಾಂಪತ್ಯ. ಆದರೆ ದೇವರು ಇಷ್ಟು ಬೇಗ ಆಕೆಯನ್ನು ಕರೆಸಿಕೊಂಡ. ಎಷ್ಟು ಹಣ ಇದ್ರೂ, ಏನಿದ್ರೂ ಮನುಷ್ಯನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದು ನಮಗೆ ನೋವಾಗುತ್ತೆ. ನಮ್ಮ ಮಗು ಅದು, ದೇವರನ್ನು ಶಪಿಸುವುದೋ ಅಥವಾ ನಾವು ಪಡೆದುಕೊಂಡಿರೋ ಆಯಸ್ಸು ಇಷ್ಟೇನಾ ಅನ್ನಬೇಕೋ ಗೊತ್ತಿಲ್ಲ. ದೇವರಲ್ಲಿ ಕೇಳೋದಿಷ್ಟೇ, ಆ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ. ಎರಡು ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ಪರಮಾತ್ಮ ಕೊಡಲಿ" ಎಂದು ಭಾವುಕರಾಗಿ ನುಡಿದರು.
ಇದನ್ನೂ ಓದಿ:ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟು ಬೇಗ ಅಲ್ಲಿಗೆ ಹೋಗುವ ಆತುರವೇನಿತ್ತು?.. ಸ್ಪಂದನಾ ಬಗ್ಗೆ ರೇಖಾರಾಣಿ ಭಾವುಕ