ಮತ ಚಲಾಯಿಸಿದ ರಾಕಿಭಾಯ್: ಸಿನಿಮಾ, ರಾಜಕೀಯ, ಪ್ರಚಾರದ ಬಗ್ಗೆ ಯಶ್ ಮನದಾಳದ ಮಾತು - yash movies
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಇಂದು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಆರಂಭಗೊಂಡು, ಸಂಜೆ 6ಕ್ಕೆ ಪೂರ್ಣಗೊಂಡಿದೆ. ರಾಜ್ಯಾದ್ಯಂತ ಬಿರುಸಿನ ಮತದಾನ ನಡೆದಿದ್ದು, ಹೆಚ್ಚಿನ ಸಂಖ್ಯೆಯ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸಹ ಮತದಾನ ಮಾಡಿದ್ದಾರೆ.
ನಗರದಲ್ಲಿ ರಾಕಿ ಭಾಯ್ ಯಶ್ ಕೂಡ ಮತದಾನ ಮಾಡಿದ್ರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನತೆಗೆ ನನ್ನ ಸಂದೇಶದ ಅಗತ್ಯವಿಲ್ಲ. ಅವರು ಎಲ್ಲವನ್ನೂ ಚೆನ್ನಾಗಿ ತಿಳಿದಿದ್ದಾರೆ. ರಾಜ್ಯದ ಪ್ರತೀ ಮತದಾರರು ವೋಟ್ ಮಾಡಬೇಕು. ಅದು ನಮ್ಮ ಹಕ್ಕು, ಕರ್ತವ್ಯ. ನಾನು ನನ್ನ ಹಕ್ಕು ಚಲಾಯಿಸಿದ್ದೀನಿ, ಅದು ಬಹಳ ಮುಖ್ಯ ಎಂದು ತಿಳಿಸಿದರು.
ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಈ ಬಾರಿ ಇಂಟ್ರೆಸ್ಟ್ ಅನಿಸಲಿಲ್ಲ. ಆ ಕಾರಣದಿಂದ ಪ್ರಚಾರಕ್ಕೆ ಹೋಗಲಿಲ್ಲ. ಕಳೆದ ಬಾರಿ ಒಂದಷ್ಟು ಉದ್ದೇಶಗಳಿತ್ತು. ಯಶೋಮಾರ್ಗದ ಮೂಲಕ ಕೆಲಸಗಳನ್ನು ಮಾಡುತ್ತಿದ್ದೆವು ಎಂದು ತಿಳಿಸಿದರು. ಇನ್ನು ಯುವಕರು ಕೂಡ ಇಂದು ಮತದಾನ ಮಾಡಿದ್ದಾರೆ. ವೋಟಿಂಗ್ ನಮ್ಮ ಹಕ್ಕು ಅನ್ನೋದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ:PHOTOS: 'ನಾವು ಮತದಾನ ಮಾಡಿದ್ವಿ, ನೀವೂ ವೋಟ್ ಮಾಡಿ'.. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಕರೆ
ರಾಜಕಾರಣಿಗಳು ಹಾಗೂ ಪಕ್ಷಗಳು ಮೂಲಭೂತ ಕೆಲಸಗಳನ್ನು ಸರಿಯಾಗಿ ಮಾಡಬೇಕು. ಆರೋಗ್ಯ, ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಅದನ್ನು ಮಾಡಿದರೆ ಸಾಕು, ಜನ ಉಳಿದ ಕೆಲಸಗಳನ್ನು ನೀಟ್ ಆಗಿ ಮಾಡಿಕೊಂಡು ಹೋಗ್ತಾರೆ ಎಂದು ತಿಳಿಸಿದರು.