ಅಭಿಮಾನಿಗಳ ಜೊತೆ ಪ್ರಜ್ವಲ್ ದೇವರಾಜ್ ಬರ್ತ್ ಡೇ ಸೆಲೆಬ್ರೇಶನ್ - ರಕ್ತದಾನ, ಅನ್ನದಾನ ಆಯೋಜಿಸಿದ ಫ್ಯಾನ್ಸ್ - Prajwal Devaraj movies
ಬೆಂಗಳೂರು: ಗಣ, ಜಾತರೆ ಸಿನಿಮಾ ಜಪದಲ್ಲಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 36ನೇ ವಸಂತಕ್ಕೆ ಕಾಲಿಟ್ಟಿರೋ ಪ್ರಜ್ವಲ್ ದೇವರಾಜ್ ಅವರಿಂದು ಬನಶಂಕರಿಯ ನಿವಾಸದಲ್ಲಿ ಮೂರು ವರ್ಷಗಳ ನಂತರ ಅಭಿಮಾನಿಗಳ ಜೊತೆ ಬರ್ತ್ ಡೇ ಸೆಲೆಬ್ರೇಶನ್ ಮಾಡಿಕೊಂಡರು. ಮೆಚ್ಚಿನ ನಟನ ಹುಟ್ಟುಹಬ್ಬಕ್ಕೆ ರಕ್ತದಾನ ಹಾಗೂ ಅನ್ನದಾನದ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಪ್ರಜ್ವಲ್ ದೇವರಾಜ್ ಮಾತನಾಡಿ, ಮೂರು ವರ್ಷಗಳ ನಂತರ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಬಹಳ ಖುಷಿಯಾಗುತ್ತಿದೆ. ಇಂದು ಗಣ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸದ್ಯದಲ್ಲೇ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಅಭಿಮಾನಿಗಳ ಈ ಪ್ರೀತಿಗೆ ನಾನು ಅಭಾರಿ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿದ್ದಾರೆ. ಕಬ್ಬಡಿ ಕಥೆ ಆಧರಿಸಿರೋ ಜಾತರೆ ಚಿತ್ರದ ಪೋಸ್ಟರ್ ಕೂಡ ಅನಾವರಣಗೊಂಡಿದೆ. ನಿರ್ದೇಶಕ ಉದಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್ಟೈನ್ಮೆಂಟ್ಸ್ ಮೂಲಕ ಗೋವರ್ಧನ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆಗಸ್ಟ್ನಲ್ಲಿ ಜಾತರೆ ಚಿತ್ರೀಕರಣ ಶುರು ಮಾಡಿ, ಜನವರಿ ವೇಳೆಗೆ ಸಿನಿಮಾ ಬಿಡುಗಡೆ ಮಾಡಲಿದ್ದಾರೆ. ಇದಲ್ಲದೇ ತತ್ಸಮ ತದ್ಭವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆ ಚಿತ್ರದ ಪೋಸ್ಟರ್ ಕೂಡ ಅನಾವರಣಗೊಂಡಿದೆ.