ಬೆಂಗಳೂರಿಗೆ ಭೇಟಿ ನೀಡಲು ಇಷ್ಟಪಡುತ್ತೇನೆ: ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ - ವಿಶ್ವ ಸುಂದರಿ ಸ್ಫರ್ಧೆ
ನವದೆಹಲಿ: 2023ರ 71 ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಗೆ ಈ ಬಾರಿ ಭಾರತ ಆತಿಥ್ಯವಹಿಸಲಿದೆ ಎಂದು ಮಿಸ್ ವರ್ಲ್ಡ್ ಆರ್ಗನೈಸೇಷನ್ ಗುರುವಾರ ಘೋಷಿಸಿದೆ. 27 ವರ್ಷಗಳ ಬಳಿಕ ವಿಶ್ವ ಸುಂದರಿ ಸ್ಫರ್ಧೆಗೆ ಭಾರತ ಆತಿಥ್ಯ ವಹಿಸಲಿದೆ. ಈ ಬಗ್ಗೆ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಿಸ್ ವರ್ಲ್ಡ್ ಸಂಸ್ಥೆಯ ಅಧ್ಯಕ್ಷೆ ಮತ್ತು ಸಿಇಒ ಜೂಲಿಯ ಮೊರ್ಲಿಯಾ 2022ರ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಉಪಸ್ಥಿತಿಯಲ್ಲಿ ಘೋಷಣೆ ಮಾಡಿದರು.
ಬಳಿಕ ಈ ಬಗ್ಗೆ ಮಾತನಾಡಿದ ವಿಶ್ವಸುಂದರಿ ಬಿಲಾವ್ಸ್ಕಾ, ಫೈನಲ್ ಸ್ಫರ್ಧೆಗಾಗಿ ಭಾರತ ಆತಿಥ್ಯ ವಹಿಸಲಿರುವುದು ತುಂಬಾ ಸಂತೋಷವಾಗಿದೆ. ಭಾರತದ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಅನ್ವೇಷಿಸಲು ಉತ್ಸುಕಳಾಗಿದ್ದೇನೆ. “ನಾನು ಗೋವಾ, ಮಣಿಪುರ ಮತ್ತು ಬೆಂಗಳೂರಿಗೆ ಭೇಟಿ ನೀಡಲು ಇಷ್ಟಪಡುತ್ತೇನೆ. ಭಾರತದಲ್ಲಿ ಹಲವಾರು ಸ್ಥಳಗಳಿವೆ, ಅವು ಅನ್ವೇಷಿಸಲು 1 ತಿಂಗಳು ಸಾಕಾಗುವುದಿಲ್ಲ. ನಾನು ಪ್ರಯಾಣಿಸಲು ಮತ್ತು ಜನರ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತೇನೆ. ಏಕೆಂದರೆ ಅವರು ಪ್ರತಿ ದೇಶದ ಪ್ರಮುಖ ಭಾಗವಾಗಿದ್ದಾರೆ. ಅಲ್ಲಿಯ ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ಕಲಿಯುವುದು ಅತ್ಯಮೂಲ್ಯ ಅನುಭವವಾಗಿದೆ. "ನಾನು ತುಂಬಾ ಉತ್ಸುಕಳಾಗಿದ್ದೇನೆ ಮತ್ತು ಬಹಳ ಸಮಯದಿಂದ ಇದಕ್ಕಾಗಿ ಕಾಯುತ್ತಿದ್ದೆ ಎಂದು ಬಿಲಾವ್ಕ್ಸಾ ಹೇಳಿದರು.
ಇನ್ನು ಈ ಬಗ್ಗೆ 2022ರ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ನ ಸಿನಿ ಶೆಟ್ಟಿ ಪ್ರತಿಕ್ರಿಯೆ ನೀಡಿ "ನಾವು ಭಾರತದಲ್ಲಿರುವುದಕ್ಕೆ ಹೆಮ್ಮೆಪಡುತ್ತೇವೆ. ವಿದೇಶಗಳಿಂದ ವಿಶ್ವಸುಂದರಿ ಸ್ಪರ್ಧೆಗೆ ಭಾರತಕ್ಕೆ ಆಗಮಿಸುತ್ತಿರುವ ಎಲ್ಲ ಯುವತಿಯರಿಗೆ 1 ತಿಂಗಳ ಕಾಲ ಭಾರತ ಮನೆಯಂತಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ:Miss World 2023: 27 ವರ್ಷಗಳ ನಂತರ ಸಿಕ್ತು ಚಾನ್ಸ್; ಭಾರತದಲ್ಲಿ ನಡೆಯಲಿದೆ 'ವಿಶ್ವ ಸುಂದರಿ 2023' ಸ್ಪರ್ಧೆ!