'ಬಾಯ್ಕಾಟ್ ಭಯದ ನಡುವೆ ಪ್ರೇಕ್ಷಕರು ಗೆಲ್ಲಿಸಿಕೊಟ್ಟರು': ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ - ಪಠಾಣ್ ವಿವಾದ
ಬಾಲಿವುಡ್ ನಟರಾದ ಶಾರುಖ್ ಖಾನ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಪಠಾಣ್ ಚಿತ್ರ ವಿವಾದದ ನಡುವೆಯೇ ತೆರೆಕಂಡು ಅದ್ಭುತ ಯಶಸ್ಸು ಸಾಧಿಸಿದೆ. ಜನವರಿ 25ರಂದು ಭಾರತ ಸೇರಿದಂತೆ ವಿಶ್ವದ 100 ದೇಶಗಳಲ್ಲಿ ಬಿಡುಗಡೆ ಆಗಿರುವ ಪಠಾಣ್ ಕಳೆದ 10 ದಿನಗಳಲ್ಲಿ ಭಾರತದಲ್ಲಿ 453 ಕೋಟಿ ರೂ., ಹೊರ ದೇಶಗಳಲ್ಲಿ ಚಿತ್ರ 276 ಕೋಟಿ ರೂ. ಸೇರಿ 729 ಕೋಟಿ ರೂ. ಸಂಗ್ರಹಿಸಿ ದಾಖಲೆ ಬರೆದಿದೆ. ಚಿತ್ರದ ಯಶಸ್ಸಿನ ಬಗ್ಗೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಹರ್ಷ ವ್ಯಕ್ತಪಡಿಸಿದರು.
ಸಿನಿಮಾ ಬಿಡುಗಡೆಗೂ ಮುನ್ನ ತೀವ್ರ ಆಕ್ರೋಶ ಎದುರಿಸಿತ್ತು. ಬಿಡುಗಡೆ ಆಗಬಾರದೆಂಬ ಕೂಗಿತ್ತು. ಹಲವೆಡೆ ಪ್ರತಿಭಟನೆಗಳು ನಡೆದವು. ಆದ್ರೀಗ ಬಾಕ್ಸ್ ಆಫೀಸ್ ಕಲೆಕ್ಷನ್ ಚಿತ್ರರಂಗ ಮತ್ತು ಅಭಿಮಾನಿಗಳ ಹುಬ್ಬೇರುವಂತೆ ಮಾಡಿದೆ. ಚಿತ್ರದ ಮೇಲಿದ್ದ ಬಾಯ್ಕಾಟ್ ಕೂಗಿನ ಬಗ್ಗೆ ಇತ್ತೀಚೆಗೆ ಮಾತನಾಡಿದ ನಿರ್ದೇಶಕ ಸಿದ್ಧಾರ್ಥ್ ಆನಂದ್, ಸಿನಿಮಾ ಬಹಿಷ್ಕಾರದ ಅಜೆಂಡಾ ವಿಫಲಗೊಂಡಿದೆ ಎಂದು ತಿಳಿಸಿದ್ದಾರೆ. ''ಸಿನಿಮಾದಲ್ಲಿ ಆಕ್ಷೇಪಾರ್ಹ ವಿಷಯಗಳು ಏನೂ ಇಲ್ಲ. ಆ ವಿಷಯ ನನಗೆ ಗೊತ್ತಿತ್ತು. ಆದ್ರೆ ಅದನ್ನು ಜನರಿಗೆ ತಲುಪಿಸುವವರು ಯಾರು ಎಂಬ ಭಯವಿತ್ತು. ಸಿನಿಮಾ ವೀಕ್ಷಣೆ ಮಾಡಿದರೆ ಮಾತ್ರ ಸತ್ಯ ಗೊತ್ತಾಗಲಿದೆ. ಭಯದ ನಡುವೆ ಪ್ರೇಕ್ಷಕರು ನಮ್ಮನ್ನು ಗೆಲ್ಲಿಸಿದ್ದಾರೆ. ಬಹಿಷ್ಕಾರ ತಂಡದ ಗುರಿ ವಿಫಲವಾದವು. ಪಠಾಣ್ ಚಿತ್ರಕ್ಕೆ ಬಹಿಷ್ಕಾರ ಹಾಕಲು ಬಯಸುವವರು ಸಹ ಬಂದು ಚಿತ್ರ ವೀಕ್ಷಿಸಲಿ'' ಎಂದರು.
ಇದನ್ನೂ ಓದಿ:5,000 ಕೋಟಿ ಪ್ರೀತಿ, 3,000 ಕೋಟಿ ಮೆಚ್ಚುಗೆ, 2 ಬಿಲಿಯನ್ ಸ್ಮೈಲ್ಸ್ .. ಏನಿದು ಶಾರುಖ್ ಕೊಟ್ಟ ಉತ್ತರ!