ಸ್ವಂತ ಹಣ ವ್ಯಯಿಸಿ ರಸ್ತೆಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್ - ವಿಡಿಯೋ - ವಿನೋದ ರಾಜ್ ಸಮಾಜ ಸೇವೆ
ನೆಲಮಂಗಲ (ಬೆಂಗಳೂರು ಗ್ರಾಮಾಂತರ):ಸದಾ ಸಮಾಜ ಸೇವೆ ಮಾಡುವ ಮೂಲಕ ಹಲವರಿಗೆ ನಟ ವಿನೋದ್ ರಾಜ್ ಸ್ಫೂರ್ತಿ, ಮಾದರಿಯಾಗಿದ್ದಾರೆ. ಈಗಾಗಲೇ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅವರು ಜನರ ಹಿತದೃಷ್ಟಿಯಿಂದ ಮತ್ತೊಂದು ಸೇವೆ ಮಾಡಿದ್ದಾರೆ. ಹೌದು, ಸ್ವಂತ ಹಣ ಖರ್ಚು ಮಾಡಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ನಟ ವಿನೋದ್ ರಾಜ್ ತಮ್ಮ ತಾಯಿ, ಹಿರಿಯ ನಟಿ ಡಾ. ಲೀಲಾವತಿ ಅವರೊಂದಿಗೆ ನೆಲಮಂಗಲ ತಾಲೂಕಿನ ಸೊಲದೇವನಹಳ್ಳಿಯ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಯಂಗನಹಳ್ಳಿ ಗ್ರಾಮ ಪಂಚಾಯಿತಿಯ ಕರೆಕಲ್ ಗ್ರಾಮದ ಮೂಲಕ ವಿನೋದ್ ರಾಜ್ ವಾಹನಗಳಲ್ಲಿ ಸಂಚರಿಸುತ್ತಾರೆ. ಆದರೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಜೀವಕ್ಕೆ ಕುತ್ತು ತಂದಿತ್ತು. ವಾಹನ ಸವಾರರ ಹಿತದೃಷ್ಟಿಯಿಂದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಿದ್ದಾರೆ.
ತಮ್ಮ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಂದ ರಸ್ತೆಯಲ್ಲಿನ ಗುಂಡಿಗಳನ್ನು ಸಿಮೆಂಟ್ನಿಂದ ಮುಚ್ಚಿಸಿದ್ದಾರೆ. ವಿನೋದ್ ರಾಜ್ ಅವರ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಅಸಡ್ಡೆಗೆ ಬೇಸರ ಸಹ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಪೊಲೀಸ್ ಕಾನ್‌ಸ್ಟೇಬಲ್ ಕಷ್ಟ ಸುಖಗಳನ್ನು ಹೇಳಲು ಬರುತ್ತಿದ್ದಾರೆ 'ಲಾಫಿಂಗ್ ಬುದ್ಧ'
ಕೋವಿಡ್ ಸಮಯದಲ್ಲಿ ಜೂನಿಯರ್ ಕಲಾವಿದರಿಗೆ ಆಹಾರ ಕಿಟ್ ವಿತರಿಸಿ ಸಹಾಯ ಮಾಡಿದ್ದರು. ಕಳೆದ ಡಿಸೆಂಬರ್ನಲ್ಲಿ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅನ್ನಪೂರ್ಣ ಎಂಬ ಯುವತಿಯ ಮದುವೆಯನ್ನೂ ಇವರೇ ಮಾಡಿಕೊಟ್ಟಿದ್ದರು. ಮದ್ದೂರು ತಾಲೂಕಿನ ಹುಳಗನಹಳ್ಳಿಯ ಪ್ರಕಾಶ್ (ಹೋಂ ಗಾರ್ಡ್) ಎಂಬುವವರ ಜೊತೆ ಅನ್ನಪೂರ್ಣ ಅವರ ಮದುವೆಯನ್ನು ಯಂಟಗಾನಹಳ್ಳಿಯ ಪುರಾತನ ಗೂಬೆಕಲ್ಲಮ್ಮ ದೇವಾಸ್ಥಾನದಲ್ಲಿ ಮಾಡಿಕೊಟ್ಟಿದ್ದರು. ಇವರ ಚಿತ್ರರಂಗ ಮತ್ತು ಸಮಾಜ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ಲೀಲಾವತಿ ಅವರ ಮನೆಗೆ ಚಿತ್ರರಂಗದ ಕಲಾವಿದರು ಭೇಟಿ ನೀಡಿ ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ ಪ್ರಶಸ್ತಿ ಪ್ರದಾನ ಮಾಡಿದ್ದರು.
ಹಾಗೆಯೇ ಸೋಲದೇವನಹಳ್ಳಿಯಲ್ಲಿ ತಮ್ಮ ಸ್ವಂತ ಹಣದಲ್ಲಿ ಲೀಲಾವತಿಯವರು ಆಸ್ಪತ್ರೆ ಕಟ್ಟಿಸಿದ್ದರು. ಈ ಆಸ್ಪತ್ರೆಗೆ ಹಣ ಹೊಂದಿಸಲು ಲೀಲಾವತಿಯವರು ತಮ್ಮ ಜಮೀನು ಮಾರಿದ್ದರು.