ಅಹಾರಕ್ಕಾಗಿ ಕೋತಿಗಳ ಪರದಾಟ: ಮೂಕ ಪ್ರಾಣಿಗಳ ಹಸಿವಿಗೆ ಸ್ಪಂದಿಸಿದ ಯುವಕ ಸಂಘ - ಅಹಾರಕ್ಕಾಗಿ ನಾಡಿಗೆ ಬಂದ ಕೋತಿಗಳು
ಕಲ್ಪತರು ನಾಡು ತುಮಕೂರು ಬರದ ನಾಡಾಗುತ್ತಿದೆ. ಮಲೆನಾಡಿನ ಸೊಬಗನ್ನು ಕಟ್ಟಿಕೊಡುವ ದೇವರಾಯನ ದುರ್ಗದ ಕಾಡು ಬಿರು ಬಿಸಿಲಿಗೆ ಪೂರ್ತಿ ಒಣಗಿ ಹೋಗಿದೆ. ಬರದ ಬೇಗುದಿಗೆ ಕಾಡು ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ಪರಿತಪಿಸುತ್ತಿವೆ. ಅದರಲ್ಲೂ ಕೋತಿಗಳ ಪಾಡಂತೂ ಹೇಳತೀರದಾಗಿದೆ. ನೀರು, ಆಹಾರವಿಲ್ಲದೆ ಹಸಿವಿನಿಂದ ಸಾಯುತ್ತಿವೆ. ಕೆಲವೊಂದು ಪ್ರಾಣಿಗಳು ಆಹಾರ ಮತ್ತು ನೀರಿಗಾಗಿ ನಾಡಿನತ್ತ ಮುಖ ಮಾಡಿವೆ. ಇಂತಹ ಪರಿಸ್ಥಿತಿಯಲ್ಲಿ ಯುವಕರ ಸಂಘವೊಂದು ಕೋತಿಗಳಿಗೆ ಆಹಾರ ಒದಗಿಸುವ ಕಾರ್ಯದಲ್ಲಿ ಮಗ್ನವಾಗಿದೆ. ಆಹಾರ, ನೀರು ಅರಸಿ ಬರುವ ಕೋತಿಗಳಿಗೆ ಕುಡಿಯುವ ನೀರಿನ ತೊಟ್ಟಿ ಇಟ್ಟು, ನೀರು ಶೇಖರಿಸುತಿದ್ದಾರೆ. ಪ್ರತಿನಿತ್ಯ ತಮ್ಮ ಕೈಲಾದಷ್ಟು ಆಹಾರ ಕೊಂಡು ತಂದು ಕೋತಿಗಳಿಗೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಹಣ್ಣು-ಹಂಪಲುಗಳನ್ನು ಈ ತಂಡಕ್ಕೆ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ. ಹೆಚ್ಚಿನ ನೆರವು ನೀಡಲು ಇಚ್ಛಿಸುವವರು 9686596965 ಅಥವಾ 8095851356ಕ್ಕೆ ಸಂಪರ್ಕಿಸಬಹುದಾಗಿದೆ.