ಆಟವಾಡುತ್ತಲೇ ಬಾವಿ ತೋಡಿ ಆಧುನಿಕ ಭಗೀರಥರಾದ ಬೆಳ್ತಂಗಡಿಯ ಚಿಣ್ಣರು! - ಮನೆಮುಂದೆ ಬಾವಿ ತೋಡಿದ ಮಕ್ಕಳು
ಬೆಳ್ತಂಗಡಿ: ಲಾಕ್ ಡೌನ್ ನಿಂದ ಶಾಲೆ ಕಾಲೇಜಿಗೆ ರಜೆ ನೀಡಿರುವುದರಿಂದ ಮಕ್ಕಳು ಆಟವಾಡುತ್ತಾ ಕಾಲ ಕಳೆಯದೆ ತಾವೇ ಮನೆ ಮುಂದೆ ಬಾವಿ ಕೊರೆದಿದ್ದು, ಅದೃಷ್ಟವಶಾತ್ ಅದರಲ್ಲಿ ನೀರು ಉಕ್ಕಿದೆ. ಮಿತ್ತಬಾಗಿಲು ಗ್ರಾಮದ ಕುಕ್ಕಾವು ಕೊಪ್ಪದ ಗುಂಡಿ ಚಿದಾನಂದ ಎಂಬುವರ ಬಾವಿ ಬತ್ತಿತ್ತು. ತಕ್ಷಣ ಚಿದಾನಂದ ಅವರ ಮಗ ಧನುಷ್ ತನ್ನ ಸಹಪಾಠಿಗಳ ಜೊತೆ ಸೇರಿ ಬಾವಿ ಅಗೆಯುವ ಸಾಹಸಕ್ಕೆ ಮುಂದಾಗಿದ್ದ. ಅದರಂತೆ ನೋಡ ನೋಡುತ್ತಲೇ ಮಕ್ಕಳು ನಾಲ್ಕೇ ದಿನಗಳಲ್ಲಿ 12 ಅಡಿ ಬಾವಿ ತೋಡಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು ಹಾಗೂ ಕುಕ್ಕಾವು ಶಾಲೆಯಲ್ಲಿ ಕಲಿಯುತ್ತಿರುವ ಧನುಷ್, ಸಹಪಾಠಿ ಪುಷ್ಪರಾಜ್ 9ನೇ ತರಗತಿ, ಪ್ರಸನ್ನ, ಗುರುರಾಜ್ 6 ನೇ ತರಗತಿ, ಶ್ರೇಯಸ್, ಭವಿನೀಶ್ ಸೇರಿ ತೋಟದಲ್ಲಿ ಬಾವಿ ತೋಡಿದ್ದಾರೆ. 12 ಅಡಿ ಆಳ 4 ಅಡಿ ಅಗಲದ ಬಾವಿ ಕೊರೆದ ಫಲವಾಗಿ 10 ಅಡಿಯಲ್ಲೇ 2 ಅಡಿ ಪರಿಶುದ್ಧ ನೀರು ಶೇಖರಣೆಗೊಳ್ಳುವ ಮೂಲಕ ಸುತ್ತಮುತ್ತಲ ಮಂದಿಗೆ ಬೆರಗು ಮೂಡಿಸಿದ್ದಾರೆ.