ಚಿಕ್ಕೋಡಿ ಜಾನುವಾರು ಸಂತೆಯಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ! - ಬಿಸಿಲಿನ ತಾಪದಲ್ಲಿ ಬೆಂಕಿ ಹತೋಟಿಗೆ ಬಾರದೆ ಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ.
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಜಾನುವಾರ ಸಂತೆಯಲ್ಲಿ ಮೇವು ತುಂಬಿದ ಟ್ರ್ಯಾಕ್ಟರ್ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಇಡಿ ಮೇವು ಮತ್ತು ಟ್ರ್ಯಾಕ್ಟರ್ ಸುಟ್ಟು ಭಸ್ಮವಾಗಿರುವ ಘಟನೆ ಜರುಗಿದೆ. ಜಾನುವಾರು ಸಂತೆ ನಡೆಯುವ ಸ್ಥಳದಲ್ಲಿ ಬಾರಿ ಜನ ಜಂಗುಳಿ ನಡುವೆ ಟ್ರ್ಯಾಕ್ಟರ್ ಮೇವು ತುಂಬಿಕೊಂಡು ಹೋಗುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಮುಂದಾದರು. ಆದರೆ, ಬಿಸಿಲಿನ ತಾಪದಲ್ಲಿ ಬೆಂಕಿ ಹತೋಟಿಗೆ ಬಾರದೆ ಇದ್ದಾಗ ಅಗ್ನಿಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ಅಷ್ಟರಲ್ಲಿ ಸಂಪೂರ್ಣ ಮೇವು ಸುಟ್ಟು ಭಸ್ಮವಾಗಿದೆ. ನಂತರ ಅಗ್ನಿ ಶಾಮಕ ವಾಹನ ಬಂದು ನೀರು ಸಿಂಪಡಿಸಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆ. ಇನ್ನು ಟ್ರ್ಯಾಕ್ಟರ್ ಮೇಲೆ ಭಾರಿ ಎತ್ತರದಲ್ಲಿ ಮೇವು ತುಂಬಿದ್ದರಿಂದ ಈ ಅನಾಹುತ ಜರುಗಿದೆ ಎನ್ನಲಾಗಿದೆ.