ಇನ್ನೂ ಮೂರು ವರ್ಷ ಯಡಿಯೂರಪ್ಪರೇ ಸಿಎಂ, ಯಾರೂ ಟಚ್ ಮಾಡಲಾಗದು : ನಾರಾಯಣಗೌಡ - ತೋಟಗಾರಿಕಾ ಸಚಿವ ನಾರಾಯಣಗೌಡ ಹೇಳಿಕೆ
ದಾವಣಗೆರೆ: ಇನ್ನೂ ಮೂರು ವರ್ಷ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಯಾರೂ ಸಹ ಅವರನ್ನು ಟಚ್ ಮಾಡಲು ಆಗಲ್ಲ ಎಂದು ಹೊನ್ನಾಳಿ ಪಟ್ಟಣದಲ್ಲಿ ತೋಟಗಾರಿಕಾ ಸಚಿವ ನಾರಾಯಣಗೌಡ ಹೇಳಿದರು. ಸಮಯ ಪರಿಪಾಲನೆ ಮಾಡುವ ವಿಚಾರದಲ್ಲಿ ಯಡಿಯೂರಪ್ಪ ಅವರೇ ಬೆಸ್ಟ್. ಹೇಳಿದ ವೇಳೆಗಿಂತ ಐದು ನಿಮಿಷ ಮುಂಚಿತವಾಗಿ ಬಂದಿರುತ್ತಾರೆ. ಅದು ಅವರ ಬದ್ಧತೆ ತೋರಿಸುತ್ತದೆ. ಹಿಂದೆ ಸಿಎಂ ಆಗಿದ್ದವರು ಯಾವ ರೀತಿ ಸಮಯಪಾಲನೆ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಹೇಳುವ ವೇಳೆ ಒಂದು, ಬರುವ ವೇಳೆ ಒಂದಾಗಿರುತಿತ್ತು. ಇವೆಲ್ಲವನ್ನೂ ನೀವೇ ನೋಡಿದ್ದೀರಿ. ಮತ್ತೆ ಸಿಎಂ ಆಗುವ ಆಸೆ ಹೊರ ಹಾಕಿದ್ದ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರದ್ದು ಸ್ವಪ್ನ ಅಷ್ಟೇ. ನಾಲ್ಕನೇ ಅವಧಿಗೆ ಸಿಎಂ ಅಗಿರುವ ಯಡಿಯೂರಪ್ಪ ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದಾರೆ. ಇದು ಎಲ್ಲರಿಗೂ ಖುಷಿ ತಂದಿದೆ. ಇತಿಮಿತಿಯೊಳಗೆ ಬಜೆಟ್ ಮಂಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.