ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದ ಆಕ್ರೋಶ: ಈಶಾನ್ಯ ರಾಜ್ಯಗಳಾದ ಅಸ್ಸೋಂ, ತ್ರಿಪುರಾ ಉದ್ವಿಗ್ನ - ತ್ರಿಪುರಾ
ಗುವಾಹಟಿ (ಅಸ್ಸೋಂ): ಕೇಂದ್ರ ಸರ್ಕಾರದ ಐತಿಹಾಸಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಮಸೂದೆ ವಿರೋಧಿಸಿ ಪ್ರತಿಭಟನಾಕಾರರು ಬೀದಿಗಿಳಿದು ತಮ್ಮ ಆಕ್ರೋಶ ಹೊರಹಾಕ್ತಿದ್ದು ತ್ರಿಪುರಾ, ಅಸ್ಸೋಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರಿ ಪ್ರಮಾಣದ ಹೋರಾಟ ನಡೆಯುತ್ತಿದೆ. ಈಗಾಗಲೇ ಲೋಕಸಭೆಯಲ್ಲಿ ಈ ಬಿಲ್ ಅನುಮೋದನೆಗೊಂಡಿದೆ. ಇಂದು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಬಿಲ್ ಮಂಡಿಸಿದ್ದು, ಅನುಮೋದನೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಇದೀಗ ವಿವಾದಿತ ಮಸೂದೆ ಮೇಲೆ ಸಂಸತ್ತಿನ ಮೇಲ್ಮನೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವಾಗಲೇ ಈಶಾನ್ಯ ರಾಜ್ಯಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಪ್ರಮುಖವಾಗಿ ಅಸ್ಸೋಂ ಹಾಗೂ ತ್ರಿಪುರಾದಲ್ಲಿ ಬೀದಿಗಿಳಿದಿರುವ ಜನ್ರು ಟೈರುಗಳಿಗೆ ಬೆಂಕಿ ಹಚ್ಚಿ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ.