25ರ ಹರೆಯಕ್ಕೆ ತಂಗವೇಲು ಮುಡಿಗೇರಿದ ಖೇಲ್ ರತ್ನ ಪ್ರಶಸ್ತಿ: ಪ್ಯಾರಾ ಅಥ್ಲಿಟ್ ಮೊಗದಲ್ಲಿ ಹರ್ಷ - 2016ರ ಪ್ಯಾರಾ ಒಲಂಪಿಕ್ಸ್
ಭಾರತೀಯ ಕ್ರೀಡಾಪಟುಗಳ ವಿಶಿಷ್ಠ ಸಾಧನೆಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ 'ರಾಜೀವ್ ಗಾಂಧಿ ಖೇಲ್ ರತ್ನ'. 25ರ ವಯಸ್ಸಿಗೆ ಈ ಪ್ರಶಸ್ತಿ ಅಥ್ಲೀಟ್ ಮರಿಯಪ್ಪನ್ ತಂಗವೇಲು ಮುಡಿಗೇರಿದೆ. 2016ರ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಇವರು ತಮಗೆ ಸಿಕ್ಕಿರುವ ಗೌರವದಿಂದ ಪುಳಕಗೊಂಡಿದ್ದಾರೆ. 'ಪ್ರಶಸ್ತಿಯಿಂದ ತುಂಬಾ ಸಂತೋಷವಾಗಿದೆ. ಈ ಸಂದರ್ಭದಲ್ಲಿ ನನ್ನ ಸಾಧನೆಗೆ ಸಹಾಯ ಮಾಡಿರುವ ಎಲ್ಲರಿಗೂ ಧನ್ಯವಾದ. ಮುಂದಿನ ದಿನಗಳಲ್ಲಿ ಭಾರತಕ್ಕಾಗಿ ಹೆಚ್ಚಿನ ಪದಕ ಗೆಲ್ಲುವ ಆಸೆ ನನ್ನಲ್ಲಿದೆ. ತಮಿಳುನಾಡು ಸರ್ಕಾರ, ಕ್ರೀಡಾ ಸಚಿವಾಲಯ ಹಾಗೂ ಕೇಂದ್ರ ಸರ್ಕಾರಕ್ಕೂ ನಾನು ಆಭಾರಿಯಾಗಿದ್ದೇನೆ' ಎಂದಿದ್ದಾರೆ. ಇದೇ ವೇಳೆ ಇವರ ಸಾಧನೆ ಕುರಿತು ಕೋಚ್ ಸತ್ಯನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ರಿಯೋದಲ್ಲಿ ನಡೆದ ಹೈಜಂಪ್ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. 2017ರಲ್ಲಿ ಇವರಿಗೆ 'ಅರ್ಜುನ ಪ್ರಶಸ್ತಿ' ಒದಗಿಬಂದಿತ್ತು.