' 60 ನಿಮಿಷದಲ್ಲಿ 4ಕೆಜಿ ಥಾಲಿ ತಿನ್ನಿ, ರಾಯಲ್ ಎನ್ಫೀಲ್ಡ್ ಗೆಲ್ಲಿ': ಏನಿದು ಸ್ಪರ್ಧೆ! - ಪುಣೆ ಬುಲೆಟ್ ಥಾಲಿ ಸುದ್ದಿ
ಪುಣೆ: ಇಲ್ಲಿನ ರೆಸ್ಟೋರೆಂಟ್ವೊಂದು ಗ್ರಾಹಕರನ್ನು ಸೆಳೆಯಲು ವಿಶೇಷವಾದ ಸ್ಪರ್ಧೆಯನ್ನು ಆಯೋಜಿಸಿದೆ. ಕೊರೊನಾದಿಂದ ಹೆಚ್ಚಿನ ನಷ್ಟ ಅನುಭವಿಸಿದ ಬಳಿಕ ರೆಸ್ಟೋರೆಂಟ್ ಈ ಸ್ಪರ್ಧೆಯನ್ನು ಆಯೋಜಿಸಿ ನಷ್ಟ ಭರಿಸಲು ಮುಂದಾಗಿದೆ. ಶಿವರಾಜ್ ಹೋಟೆಲ್ ಈ ಕಾರ್ಯಕ್ಕೆ ಮುಂದಾಗಿದ್ದು, 'ವಿನ್ ಎ ಬುಲೆಟ್ ಬೈಕ್' ಎಂಬ ಸ್ಪರ್ಧೆ ಆಯೋಜಿಸಿದೆ. 60 ನಿಮಿಷಗಳಲ್ಲಿ 4 ಕೆಜಿ ಥಾಲಿಯನ್ನು ತಿನ್ನಬೇಕು. ಈ ಸ್ಪರ್ಧೆಯನ್ನು ಪೂರ್ಣ ಮಾಡಿದಲ್ಲಿ 1.65 ಲಕ್ಷ ಮೌಲ್ಯದ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ನಿಮ್ಮದಾಗಲಿದೆ ಎಂದು ಹೋಟೆಲ್ ಮಾಲೀಕ ಅತುಲ್ ವೈಕರ್ ಹೇಳಿದ್ದಾರೆ. 4 ಕೆಜಿ ಮಟನ್ ಮತ್ತು ಹುರಿದ ಮೀನುಗಳಿಂದ ತಯಾರಿಸಿದ ಸುಮಾರು 12 ಬಗೆಯ ಭಕ್ಷ್ಯಗಳನ್ನು ಥಾಲಿ ಒಳಗೊಂಡಿದೆ. ಫ್ರೈಡ್ ಸುರ್ಮೈ, ಪೊಮ್‌ಫ್ರೆಟ್ ಫ್ರೈಡ್ ಫಿಶ್, ಚಿಕನ್ ತಂದೂರಿ, ಡ್ರೈ ಮಟನ್, ಗ್ರೇ ಮಟನ್, ಚಿಕನ್ ಮಸಾಲಾ ಮತ್ತು ಕೊಲಂಬಿ (ಸೀಗಡಿ) ಬಿರಿಯಾನಿ ಮುಂತಾದ ಭಕ್ಷ್ಯಗಳನ್ನು ಒಳಗೊಂಡಿರುವ ಥಾಲಿ ತಯಾರಿಸಲು 55 ಸದಸ್ಯರು ಕೆಲಸಕ್ಕೆ ಸೇರಿದ್ದಾರೆ. ಈ ಹೋಟೆಲ್ ಪ್ರತಿದಿನ ಸುಮಾರು 65 ಥಾಲಿಗಳನ್ನು ಮಾರಾಟ ಮಾಡುತ್ತದೆ. ಶಿವರಾಜ್ ಹೋಟೆಲ್ ಆರು ವಿಧದ ದೈತ್ಯ ಥಾಲಿಗಳನ್ನು ಒದಗಿಸುತ್ತದೆ. ಅವುಗಳೆಂದರೆ ವಿಶೇಷ ರಾವಣ ಥಾಲಿ, ಬುಲೆಟ್ ಥಾಲಿ, ಮಾಲ್ವಾನಿ ಫಿಶ್ ಥಾಲಿ, ಪಹೇಲ್ವಾನ್ ಮಟನ್ ಥಾಲಿ, ಬಕಾಸೂರ್ ಚಿಕನ್ ಥಾಲಿ ಮತ್ತು ಸರ್ಕಾರ್ ಮಟನ್ ಥಾಲಿ.
Last Updated : Jan 21, 2021, 12:20 PM IST