ಮೋದಿ ಏಕಕಾಲದಲ್ಲಿ ಎರಡು ಕುದುರೆ ಓಡಿಸುವ ಯತ್ನ ಮಾಡ್ತಿದ್ದಾರೆ: ಓವೈಸಿ ಟೀಕೆ
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಬಿಹಾರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದು, ಎನ್ಡಿಎ ಅಭ್ಯರ್ಥಿಗಳ ಪರ ಮತಯಾಚನೆ ಮಾಡ್ತಿದ್ದಾರೆ. ಇದೀಗ ಅವರ ವಿರುದ್ಧ ಹೈದರಾಬಾದ್ ಸಂಸದ, ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ತಮ್ಮ ಭಾಷಣದಲ್ಲಿ ಎಲ್ಪಿಜಿ ಪಕ್ಷದ ಉಲ್ಲೇಖ ಮಾಡಿಲ್ಲ. ಜತೆಗೆ ಜೆಡಿಯು ಜತೆ ಮೈತ್ರಿ ಮಾಡಿಕೊಂಡಿದ್ರೂ, ಬಿಜೆಪಿ ಪ್ರತ್ಯೇಕ ಪ್ರಣಾಳಿಕೆ ರಿಲೀಸ್ ಮಾಡಿದೆ. ಈ ಮೂಲಕ ಏಕಕಾಲದಲ್ಲಿ ಬಿಜೆಪಿ ಎರಡು ಕುದುರೆ ಓಡಿಸುವ ಪ್ರಯತ್ನ ನಡೆಸಿದ್ದಾರೆ. ಒಂದು ಕುದುರೆ ಬಿಹಾರದಲ್ಲಿ ಆಡಳಿತ ನಡೆಸಲು ಹಾಗೂ ಮತ್ತೊಂದು ಕುದುರೆ ಬೇರೆ ಕಡೆ ಇಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ಒಂದೇ ವರ್ಷದಲ್ಲಿ 19 ಲಕ್ಷ ಉದ್ಯೋಗದ ವಾಗ್ದಾನ, ಕೋವಿಡ್ ವ್ಯಾಕ್ಸಿನ್ ಉಚಿತವಾಗಿ ನೀಡುವ ಭರವಸೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂದು ಪ್ರಶ್ನೆ ಮಾಡಿರುವ ಅವರು, ಬಿಹಾರದಲ್ಲಿ ನಿತೀಶ್ ಕುಮಾರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ತಮ್ಮ ಅಭ್ಯರ್ಥಿಯನ್ನು ಸಿಎಂ ಮಾಡುವ ಹುನ್ನಾರ ನಡೆಯುತ್ತಿದೆ ಎಂದಿದ್ದಾರೆ.