23 ಗಂಟೆಗಳ ಜರ್ನಿ.. ಭರ್ಜರಿ ಸ್ವಾಗತದೊಂದಿಗೆ ಕೊನೆಗೂ ತವರು ತಲುಪಿದ ಚಿನ್ನಮ್ಮ - ತಮಿಳನಾಡಿನ ಚೆನ್ನೈ
ಚೆನ್ನೈ (ತಮಿಳುನಾಡು): ನಾಲ್ಕು ವರ್ಷ ಸೆರೆವಾಸ ಅನುಭವಿಸಿ, ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿ ನಿನ್ನೆ ಬೆಳಗ್ಗೆ ಬೆಂಗಳೂರಿನಿಂದ ಹೊರಟಿದ್ದ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ.ಶಶಿಕಲಾ ಕೊನೆಗೂ ತಮಿಳನಾಡಿನ ಚೆನ್ನೈನಲ್ಲಿರುವ ತಮ್ಮ ನಿವಾಸ ತಲುಪಿದ್ದಾರೆ. ದಾರಿಯುದ್ದಕ್ಕೂ ರ‍್ಯಾಲಿ ನಡೆಸಿಕೊಂಡು ಬಂದಿದ್ದ ಚಿನ್ನಮ್ಮಗೆ ಅವರ ನಿವಾಸದ ಮುಂದೆ ನೆರೆದಿದ್ದ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ. ಇದಕ್ಕೂ ಮುನ್ನ ರಾಮವರಂನಲ್ಲಿರುವ ಎಐಎಡಿಎಂಕೆ ಸಂಸ್ಥಾಪಕ ಮತ್ತು ದಿವಂಗತ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಮನೆಗೆ ಭೇಟಿ ನೀಡಿದ್ದ ಶಶಿಕಲಾ, ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಹೂಮಾಲೆ ಹಾಕಿ ನಮಿಸಿದರು.