ವಾಯು ಮಾಲಿನ್ಯ, ಸರಿಯಾದ ಜೀವನ ಶೈಲಿಯ ಅನುಕರಣೆ ಮಾಡದೇ ಇರುವುದು ಮತ್ತಿತ್ತರ ಕಾರಣ ಏನೇ ಇರಲಿ. 30 ವರ್ಷ ದಾಟಿದ ಬಳಿಕ ಮುಖದಲ್ಲಿ ನೆರಿಗೆಗಳು ಅನೇಕರನ್ನು ಕಾಡುವುದು ಸುಳ್ಳಲ್ಲ. ಇಂತಹ ನೆರಿಗೆಗಳು ಮುಖದ ಅಂದವನ್ನು ಹಾಳು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅವಧಿಗೆ ಮುನ್ನ ಕಾಣಿಸಿಕೊಳ್ಳುವ ಈ ನೆರಿಗೆ ನಿಮ್ಮ ಸೌಂದರ್ಯಕ್ಕೆ ತೊಡಕಾಗದಂತೆ ಕಾಪಾಡುವುದು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಮುಂಜಾಗ್ರತೆ ವಹಿಸುವುದು ಅಗತ್ಯ. ಒಂದು ವೇಳೆ, ಈ ರೀತಿ ನೆರಿಗೆಗಳು ಕಾಡುತ್ತಿದ್ದರೆ, ಈ ರೀತಿಯ ಸರಳ ಕ್ರಮವನ್ನು ಅನುಸರಿಸುವ ಮೂಲಕ ಅದಕ್ಕೆ ಪರಿಹಾರ ಕಂಡು ಕೊಳ್ಳಬಹುದಾಗಿದೆ.
ತೆಂಗಿನ ಎಣ್ಣೆ ಮುಖಕ್ಕೆ ಹಚ್ಚುವುದರಿಂದ ಇದೆ ಪ್ರಯೋಜನ:ರಾತ್ರಿ ಮಲಗುವ ಮುನ್ನ ಮುಖಕ್ಕೆ ತೆಂಗಿನ ಎಣ್ಣೆಯನ್ನು ಪ್ರತಿನಿತ್ಯ ಹಚ್ಚುವುದರಿಂದ ಸಾಕಷ್ಟು ಪ್ರಯೋಜನ ಇದೆ. ಇದು ಮುಖಕ್ಕೆ ಉತ್ತಮ ಮಾಶ್ಚರೈಸರ್ ಆಗಿ ಕೆಲಸ ನಿರ್ವಹಿಸುವ ಜೊತೆಗೆ ಇದು ನೆರಿಗೆಗಳನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತದೆ. ಈ ಎಣ್ಣೆಗೆ ಒಂದು ಚಮಚ ಜೇನು ತುಪ್ಪ, ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಇದನ್ನು ಮುಖಕ್ಕೆ ಹಚ್ಚಿ. ಒಂದು ಗಂಟೆಯ ಬಳಿಕ ಇದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಲ್ಲಿನ ಜೇನು ತುಪ್ಪ ಮುಖಕ್ಕೆ ಮಾಶ್ಚರೈಸರ್ ನೀಡಿದರೆ, ನಿಂಬೆಯಲ್ಲಿನ ವಿಟಮಿನ್ ಸಿ ಮುಖದ ಪುನಶ್ಚೇತನಕ್ಕೆ ಕಾರಣವಾಗುತ್ತದೆ.
ಕಣ್ಣಿನ ಮೇಲೆ ಸೌತೆ ಕಾಯಿ ಇಟ್ಟುಕೊಳ್ಳಿ:ಬಹುತೇಕರಿಗೆ ಅವರ ವಯಸ್ಸಾಗುವಿಕೆ ಆರಂಭ ಆಗುವುದು ಕಣ್ಣಿನಿಂದ. ಕಣ್ಣಿನ ಕೆಳಗೆ ಕಾಣಿಸಿಕೊಳ್ಳುವ ನೆರಿಗೆಗಳು ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಇದನ್ನು ತಡೆಯಲು ಸೌತೆಕಾಯಿ ತುಂಡನ್ನು ಹೆಚ್ಚಿ ಅದನ್ನು ಕಣ್ಣಿನ ಮೇಲೆ ಇಟ್ಟು ಕೊಳ್ಳುವುದರಿಂದ ಮುಖದ ನೆರಿಗೆ ಕಡಿಮೆ ಆಗುತ್ತದೆ. ರಾತ್ರಿ ಮಲಗುವ ಮುನ್ನ ಈ ರೀತಿ ಕ್ರಮ ಅನುಸರಿಸುವುದರಿಂದ ಕಣ್ಣಿನ ದಣಿವು ಕೂಡ ನಿವಾರಣೆ ಮಾಡುತ್ತದೆ.