ಬೆಂಗಳೂರು:ಯಾವುದೇ ರೋಗಗಳನ್ನು ತಡೆಗಟ್ಟುವಲ್ಲಿ ಲಸಿಕೆಗಳ ಪಾತ್ರ ಪ್ರಮುಖವಾಗಿದೆ. ಇದೇ ಕಾರಣದಿಂದ ಲಸಿಕೆಗಳನ್ನು ಅವಶ್ಯವಾಗಿ ಪ್ರತಿಯೊಬ್ಬರು ಪಡೆಯಬೇಕು. ಅದರಲ್ಲೂ ಕೋವಿಡ್ 19 ಸಾಂಕ್ರಾಮಿಕತೆ ತಡೆಗಟ್ಟುವಲ್ಲಿ ಲಸಿಕೆಗಳು ಅತ್ಯಂತ ನಿರ್ಣಯಕ ಪಾತ್ರವಹಿಸಿದರು. ನವಜಾತ ಶಿಶುಗಳಿಂದಲೇ ಅನೇಕ ಸಮಸ್ಯೆಗಳ ವಿರುದ್ಧ ಹೋರಾಡಲು ಲಸಿಕೆಗಳನ್ನು ನೀಡುವುದು ಅವಶ್ಯವಾಗುತ್ತದೆ. ಇದೇ ಕಾರಣಕ್ಕೆ ಏಪ್ರಿಲ್ ಕೊನೆಯ ವಾರವನ್ನು ವಿಶ್ವ ಲಸಿಕೆ ಸಪ್ತಾಹವಾಗಿ ಆಚರಿಸುವುದರ ಜೊತೆಗೆ ಲಸಿಕೆಯ ಅಗತ್ಯತೆಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸಿ ಹೇಳಲಾಗುವುದು.
ಲಸಿಕೆಗಳ ಪ್ರಮಾಣ ಕಡಿಮೆಯಾಗುವುದಕ್ಕೆ ಇದರಲ್ಲಿನ ಅರಿವಿನ ಕೊರತೆ ಮತ್ತು ಲಸಿಕೆಗಳ ಭಯ ಮತ್ತು ಲಸಿಕೆಗಳ ಅಲಭ್ಯತೆ ಕಾರಣವಾಗಿದೆ. ಇದೇ ಕಾರಣಕ್ಕೆ ಈ ಕುರಿತು ಜಾಗೃತಿಗೆ ಏಪ್ರಿಲ್ ಕಡೆಯ ವಾರದಿಂದ ಅಂದರೆ ಏಪ್ರಿಲ್ 24ರಿಂದ ಏಪ್ರಿಲ್ 30ರವರೆಗೆ ವಿಶ್ವ ಲಸಿಕೆ ವಾರವಾಗಿ ಆಚರಣೆ ಮಾಡಲಾಗುವುದು.
ಲಸಿಕೆ ಪಡೆಯಲು ಹಿಂದೇಟು: ಯುನಿಸೆಫ್ ಪ್ರಕಾರ, ಜಗತ್ತಿನ 20 ಮಿಲಿಯನ್ ಮಕ್ಕಳು ಅನೇಕ ಕಾರಣದಿಂದ ಇಂದು ಲಸಿಕೆ ಪಡೆಯುತ್ತಿಲ್ಲ. ಇದರ ಫಲಿತಾಂಶವಾಗಿ ಅನೇಕ ಜನರು ಇಂದು ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಇದಷ್ಟೇ ಅಲ್ಲ, ಜಗತ್ತನ್ನು ಕಾಡಿದ್ದ ಕೋವಿಡ್ 19 ತಡೆಯಲು ಲಸಿಕೆ ಅಗತ್ಯ ಎಂದು ಮನವರಿಕೆ ಮಾಡಿದ್ದರು, ದೊಡ್ಡ ಸಂಖ್ಯೆಯ ಮಂದಿ ಗೊಂದಲ ಮತ್ತು ಭಯದಿಂದ ಇದನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು.
ಅನೇಕ ರೋಗ ಸೋಂಕುಗಳನ್ನು ತಡೆಯುವಲ್ಲಿ ಲಸಿಕೆ ಅತ್ಯವಶ್ಯಕವಾಗುತ್ತದೆ. ಆದರೆ, ಅವಶ್ಯವಿರುವ ಅನೇಕ ಲಸಿಕೆಗಳನ್ನು ಅನೇಕ ಕಾರಣಗಳಿಂದ ಮಕ್ಕಳು ಪಡೆಯುತ್ತಿಲ್ಲ. ಇದೇ ಕಾರಣಕ್ಕೆ ಈ ವರ್ಷವನ್ನು ದಿ ಬಿಗ್ ಕ್ಯಾಚ್ ಅಪ್ ಘೋಷವಾಕ್ಯದೊಂದಿಗೆ ಈ ಸಪ್ತಾಹ ನಡೆಸಲಾಗುತ್ತಿದೆ.
ರೋಗದ ಜಾಗ್ರತೆಗೆ ಲಸಿಕೆ ಅಗತ್ಯ: ಅನೇಕ ಮಾರಣಾಂತಿಕ ರೋಗದಿಂದ ಕಾಪಾಡಲು ನವಜಾತ ಶಿಶುಗಳಿಗೆ ಅನೇಕ ವಿಧದ ಲಸಿಕೆಗಳನ್ನು ನೀಡಲಾಗುವುದು. ಜೊತೆಗೆ ಇಂತಹ ಅನೇಕ ರೋಗಗಳಿಗೆ ಒಳಗಾಗದಂತೆ ತಡೆಯಲು ವಯಸ್ಕರಿಗೂ ಲಸಿಕೆಗಳನ್ನು ಪಡೆಯುವಂತೆ ಸಲಹೆ ನೀಡಲಾಗುತ್ತದೆ. ಲಸಿಕೆಗಳ ಪ್ರಯೋಜನ ತಿಳಿಯದೇ ಅನೇಕ ಮಂದಿ ಭಯ ಅಥವಾ ಮತ್ತಿತ್ತರ ಕಾರಣದಿಂದ ಹಿಂದೆ ಸರಿಯುತ್ತಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಅನೇಕ ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಸಂಘಟನೆಗಳು ವಿಶ್ವರೋಗ ನಿರೋಧಕ ವಾರದಲ್ಲಿ ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಯತ್ನ ನಡೆಸುತ್ತಿದೆ.