ಕರ್ನಾಟಕ

karnataka

ETV Bharat / sukhibhava

ನ.19 ವಿಶ್ವ ಶೌಚಾಲಯಗಳ ದಿನ: ಶೌಚಾಲಯಗಳ ಬಳಕೆ, ಸ್ವಚ್ಛತೆಯ ಪಣ - ಶೌಚಾಲಯಗಳ ದಿನಾಚರಣೆ

ವಿಶ್ವದಲ್ಲಿಯೇ 3.6 ಬಿಲಿಯನ್​ ಜನರು ಮಾತ್ರ ಶೌಚಾಲಯಗಳನ್ನು ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಳಕೆ ವಿರಳವೇ ಸರಿ. ಅಲ್ಲಿ ಜನರು ಈಗಲೂ ಬಯಲು ಪ್ರದೇಶದಲ್ಲಿ ಶೌಚಕ್ಕೆ ಹೋಗುವುದನ್ನು ನಾವು ಕಾಣಬಹುದಾಗಿದೆ.

world toilet day
ವಿಶ್ವ ಶೌಚಾಲಯಗಳ ದಿನ

By

Published : Nov 19, 2021, 5:23 PM IST

ನ.19 ಶೌಚಾಲಯಗಳ ದಿನ. ಶೌಚಾಲಯಗಳ ಬಳಕೆಯ ಬಗ್ಗೆ ಸರ್ಕಾರಗಳು, ಸಂಘ ಸಂಸ್ಥೆಗಳು ಎಷ್ಟೇ ಪ್ರಚುರಪಡಿಸಿದರೂ ಜನರು ಅದನ್ನು ವ್ಯಾಪಕವಾಗಿ ಬಳಸದೇ ಇರುವುದು ಅನೈರ್ಮಲ್ಯ ಇನ್ನೂ ಜೀವಂತವಾಗಿರುವುದಕ್ಕೆ ಕಾರಣವಾಗಿದೆ.

ವಿಶ್ವದಲ್ಲಿಯೇ 3.6 ಬಿಲಿಯನ್​ ಜನರು ಮಾತ್ರ ಶೌಚಾಲಯಗಳನ್ನು ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಬಳಕೆ ವಿರಳವೇ ಸರಿ. ಅಲ್ಲಿ ಜನರು ಈಗಲೂ ಬಯಲು ಪ್ರದೇಶದಲ್ಲಿ ಶೌಚಕ್ಕೆ ಹೋಗುವುದನ್ನು ನಾವು ಕಾಣಬಹುದಾಗಿದೆ.

ಶುಚಿತ್ವ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯ ಬಳಕೆ ಅತ್ಯಗತ್ಯವಾಗಿದೆ. ಶೌಚಾಲಯಗಳ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸರ್ಕಾರಗಳು ಮತ್ತು ಸಾಮಾಜಿಕ ಸಂಸ್ಥೆಗಳು ನಾನಾ ರೀತಿಯ ಪ್ರಯತ್ನ ಮಾಡುತ್ತಲೇ ಇದ್ದಾರೆ. ಇದರ ಬಳಕೆಯ ಬಗ್ಗೆ ಜನರಲ್ಲಿ ಅಷ್ಟಾಗಿ ಜಾಗೃತಿ ಮೂಡದೇ ಇರುವುದು ಮಾತ್ರ ಸೋಜಿಗ.

ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶ್ವ ಶೌಚಾಲಯ ಸಂಸ್ಥೆಯು 2001ರಲ್ಲಿ ನವೆಂಬರ್​ 19 ರಂದು 'ವಿಶ್ವ ಶೌಚಾಲಯ ದಿನ'ವನ್ನು ಆಚರಿಸಲು ಘೋಷಿಸಿತು. 13 ವರ್ಷಗಳ ತರುವಾಯ ಅಂದರೆ 2013ರಲ್ಲಿ ವಿಶ್ವಸಂಸ್ಥೆಯು ನ.19 ಅನ್ನು 'ವಿಶ್ವ ಶೌಚಾಲಯಗಳ ದಿನ' ಎಂದು ಅಧಿಕೃತವಾಗಿ ಘೋಷಣೆ ಮಾಡಿತು.

ಅಸುರಕ್ಷಿತ ಶೌಚಾಲಯಗಳ ಬಳಕೆಯ ಪರಿಣಾಮಗಳೇನು?

ನಮ್ಮ ದೇಶದಲ್ಲಿ ಅನೇಕ ಜನರು, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಶೌಚಾಲಯದ ಬಳಕೆ ನಗಣ್ಯವಾಗಿದೆ. ಇನ್ನೂ ಕೆಲವರು ಸಾರ್ವಜನಿಕ ಶೌಚಾಲಯಗಳನ್ನು ಬಳಕೆ ಮಾಡುವುದರಿಂದ ಅನಾರೋಗ್ಯಕ್ಕೀಡಾಗುತ್ತಿರುವುದು ಕಂಡುಬಂದಿದೆ. ಅನೈರ್ಮಲ್ಯದಿಂದ ಕೂಡಿದ ಸಾರ್ವಜನಿಕ ಶೌಚಾಲಯಗಳ ಬಳಕೆಯಿಂದ ಸೋಂಕು ಹಬ್ಬುವುದು ಸಹಜ.

ಅದರಲ್ಲೂ ಮಹಿಳೆಯರು, ಯುವತಿಯರಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ. ಮುಟ್ಟಿನ ಮತ್ತು ಗರ್ಭಧಾರಣೆಯ ವೇಳೆ ಗುಪ್ತಾಂಗ ಸೋಂಕು, ಮೂತ್ರದ ಸೋಂಕು ಸೇರಿದಂತೆ ನಾನಾ ರೀತಿಯ ತೊಂದರೆಗಳಿಗೆ ತುತ್ತಾಬೇಕಾಗುತ್ತದೆ.

ಇನ್ನು ಮುಖ್ಯವಾದ ಸಂಗತಿಯೆಂದರೆ, ಅಡುಗೆ ಮಾಡುವ ಮತ್ತು ಊಟದ ಮೊದಲು ಶೌಚಾಲಯವನ್ನು ಬಳಕೆ ಮಾಡಿದ ಸಂದರ್ಭದಲ್ಲಿ ಸಾಬೂನಿನಿಂದ ಶುದ್ಧವಾಗಿ ಕೈ ತೊಳೆಯದಿರುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕುಡಿಯುವ ನೀರೂ ಮಲಿನ, ಅನಾರೋಗ್ಯ, ಸಾವಿಗೆ ಆಹ್ವಾನ

ಜಾಗತಿಕವಾಗಿ, ಕನಿಷ್ಠ 2 ಬಿಲಿಯನ್ ಜನರು ಮಲದಿಂದ ಕಲುಷಿತಗೊಂಡ ಕುಡಿಯುವ ನೀರಿನ ಮೂಲವನ್ನು ಬಳಸುತ್ತಿದ್ದಾರೆ ಎಂದು ಎಂಬ ಆಘಾತಕಾರಿ ಅಂಶವನ್ನು ವಿಶ್ವಸಂಸ್ಥೆ ತಿಳಿಸಿದೆ. ಮಲಿನ ನೀರು, ಕಳಪೆ ನೈರ್ಮಲ್ಯಕ್ಕೆ ಸಂಬಂಧಿಸಿದ ಅತಿಸಾರದಿಂದ 5 ವರ್ಷದೊಳಗಿನ 700ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಮೃತಪಡುತ್ತಿರುವ ಗಂಭೀರ ವಿಚಾರವನ್ನು ವಿಶ್ವಸಂಸ್ಥೆ ಹೊರಹಾಕಿದೆ.

ಬಯಲು ಶೌಚಾಲಯವನ್ನೇ ಅವಲಂಬಿಸಿರುವ ದೇಶಗಳಲ್ಲಿ ಮಕ್ಕಳ ಸಾವಿನ ಪ್ರಮಾಣ, ಅಪೌಷ್ಟಿಕತೆ ತಾಂಡವವಾಡುತ್ತಿದೆ. ಇದು ಜನರನ್ನು ಆರ್ಥಿಕ ಅಸಮಾನತೆಗೆ ದೂಡಿ, ಬಡತನ ಮತ್ತು ಅಪೌಷ್ಟಿಕತೆ ಇನ್ನಷ್ಟು ಹೆಚ್ಚು ಮಾಡುತ್ತಿದೆ ಎಂಬುದು ಕಳವಳಕಾರಿ ವಿಚಾರವಾಗಿದೆ.

ಶೌಚಾಲಯಗಳ ಬಳಕೆಯಲ್ಲಿ ಭಾರತದ ಪಾತ್ರ ಹೇಗಿದೆ?

2014 ರಲ್ಲಿ ಭಾರತದಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಪ್ರಾರಂಭವಾದಾಗಿನಿಂದ, ಅನೇಕ ಗ್ರಾಮೀಣ ಕುಟುಂಬಗಳು ಈಗ ಮನೆಯಲ್ಲಿ ಶೌಚಾಲಯಗಳನ್ನು ಬಳಕೆ ಮಾಡುವತ್ತ ಹೆಜ್ಜೆ ಹಾಕುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇನ್ನೂ ಹಲವಾರು ಕುಟುಂಬಗಳು ಶೌಚಾಲಯಗಳ ಬಳಕೆ ಮಾಡದೇ ಇರುವುದೂ ಗೋಚರವಾಗುತ್ತದೆ. ಸರ್ಕಾರ ಮತ್ತು ಸಂಘಸಂಸ್ಥೆಗಳು ಜನರಿಗೆ ಶೌಚಾಲಯಗಳನ್ನು ಒದಗಿಸುವುದರ ಜೊತೆಗೆ ಅವುಗಳ ಬಳಕೆ ಮತ್ತು ಸ್ವಚ್ಛತೆಯ ಬಗ್ಗೆಯೂ ಅರಿವು ಮೂಡಿಸಬೇಕಿದೆ.

ಶೌಚಾಲಯಗಳ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ವಿಶ್ವಸಂಸ್ಥೆ ಈ ವರ್ಷ 'ಶೌಚಾಲಯಗಳ ಮೌಲ್ಯೀಕರಣ' ಎಂಬ ಘೋಷಣೆಯೊಂದಿಗೆ ವಿಶ್ವ ಶೌಚಾಲಯಗಳ ದಿನವನ್ನು ಆಚರಿಸಲಾಗುತ್ತಿದೆ. ಒಟ್ಟಾರೆಯಾಗಿ ಶೌಚಾಲಯಗಳ ಬಳಕೆ ಮತ್ತು ಸ್ವಚ್ಛತೆ ಕಾಪಾಡುವ ಬಗ್ಗೆ ನಾವೆಲ್ಲರೂ ಪಣತೊಡಬೇಕಾಗಿದೆ.

ABOUT THE AUTHOR

...view details