ಹೈದರಾಬಾದ್: ವಿಶ್ವದಾದ್ಯಂತ ಪೋಲಿಯೊ ನಿರ್ಮೂಲನೆ ಮತ್ತು ಪೋಲಿಯೊ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವ ಪೋಲಿಯೊ ದಿನವನ್ನು ಆಚರಿಸಲಾಗುತ್ತದೆ.
ಭಾರತವು ಪೋಲಿಯೊ ಮುಕ್ತ ರಾಷ್ಟ್ರವಾಗಿದೆ ಎಂದು ಹೇಳಲಾಗಿದೆ. ಆದರೆ, ಇನ್ನೂ ಕೆಲ ದೇಶಗಳು ಈ ಸಂಕೀರ್ಣ ಕಾಯಿಲೆಯಿಂದ ಸಂಪೂರ್ಣ ಮುಕ್ತವಾಗಿಲ್ಲ. ದಶಕಗಳಿಂದ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪ್ರಪಂಚದ ಬಹುತೇಕ ಎಲ್ಲ ದೇಶಗಳ ಅನೇಕ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ರೋಗವನ್ನು ನಿರ್ಮೂಲನೆ ಮಾಡಲು, ರೋಗದಿಂದ ಪ್ರತಿ ಮಗುವನ್ನು ರಕ್ಷಿಸಲು ಶ್ರಮಿಸುತ್ತಿವೆ. ಮಕ್ಕಳು ಲಸಿಕೆಗಳ ರಕ್ಷಣೆ ಪಡೆಯಲು ಅನೇಕ ಆರೋಗ್ಯ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ಮತ್ತು ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಈ ಅಭಿಯಾನಕ್ಕೆ ನಿರ್ದೇಶನ ನೀಡುವ ಮತ್ತು ಪೋಲಿಯೊ ನಿರ್ಮೂಲನೆ ಮತ್ತು ಪೋಲಿಯೊ ಲಸಿಕೆ ಬಗ್ಗೆ ಜಾಗತಿಕ ವೇದಿಕೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 24 ರಂದು ವಿಶ್ವ ಪೋಲಿಯೊ ದಿನ ಆಚರಿಸಲಾಗುತ್ತದೆ. 2022 ರಲ್ಲಿ, ಈ ದಿನವನ್ನು "ತಾಯಂದಿರು ಮತ್ತು ಮಕ್ಕಳಿಗೆ ಆರೋಗ್ಯಕರ ಭವಿಷ್ಯ" ಎಂಬ ವಿಷಯದ ಮೇಲೆ ಆಚರಿಸಲಾಗುತ್ತಿದೆ.
ಇದೊಂದು ಸಾಮಾನ್ಯ ಕಾಯಿಲೆ ಎಂದೇ ಪರಿಗಣಿಸಲಾಗಿತ್ತು:30 ವರ್ಷಗಳ ಹಿಂದೆ ಪೋಲಿಯೊವನ್ನು ಭಾರತದಲ್ಲಿ ಸಾಮಾನ್ಯ ಕಾಯಿಲೆ ಎಂದು ಪರಿಗಣಿಸಲಾಗಿತ್ತು ಎಂಬುದು ಗಮನಾರ್ಹ. ಆದರೆ ಭಾರತ ಸರ್ಕಾರದ ಪಲ್ಸ್ ಪೋಲಿಯೊ ಅಭಿಯಾನ ಸೇರಿದಂತೆ ಅನೇಕ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ವಿವಿಧ ಅಭಿಯಾನಗಳು ಮತ್ತು ಪ್ರಯತ್ನಗಳ ಕಾರಣದಿಂದ ಮಾರ್ಚ್ 27, 2014 ರಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರ ಎಂದು ಘೋಷಿಸಿತು.
ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಪೋಲಿಯೊ ನಿರ್ಮೂಲನೆ ಪ್ರಯತ್ನದ ಫಲವಾಗಿ 1995 ರಲ್ಲಿ ಭಾರತದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಇದರ ಅಡಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಎರಡು ಡೋಸ್ ಪೋಲಿಯೊ ಲಸಿಕೆಯನ್ನು ನೀಡಲಾಯಿತು.
ಯುನಿಸೆಫ್ ಮತ್ತು ರೋಟರಿ ಇಂಟರ್‌ನ್ಯಾಶನಲ್‌ನಂತಹ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾರತದ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಪ್ರಮುಖ ಪಾತ್ರ ವಹಿಸಿವೆ. ಈಗಲೂ ಭಾರತ ಸರ್ಕಾರದ ಪಲ್ಸ್ ಪೋಲಿಯೋ ಅಭಿಯಾನದಡಿ ಮಕ್ಕಳಿಗೆ ಮನೆ ಮನೆಗೆ ತೆರಳಿ ಪೋಲಿಯೋ ಡೋಸ್ ನೀಡಲಾಗುತ್ತಿದೆ.
ಜೋನಾಸ್ ಸಾಲ್ಕ್ ಜನ್ಮದಿನದ ನಿಮಿತ್ತ ಈ ದಿನ:ರೋಟರಿ ಇಂಟರ್‌ನ್ಯಾಶನಲ್‌ನಿಂದ ಈ ದಿನದ ಆಚರಣೆಯನ್ನು ಆರಂಭಿಸಲಾಯಿತು. ಪೋಲಿಯೊ ಲಸಿಕೆ ಕಂಡುಹಿಡಿದ ವಿಜ್ಞಾನಿ ಜೋನಾಸ್ ಸಾಲ್ಕ್ ಅವರ ಜನ್ಮದಿನದ ನೆನಪಿಗಾಗಿ ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಜೋನಾಸ್ ಸಾಲ್ಕ್ ಮತ್ತು ಅವರ ತಂಡವು 1955 ರಲ್ಲಿ ಪೋಲಿಯೊ ಲಸಿಕೆ ಕಂಡು ಹಿಡಿದರು.