ಬೆಂಗಳೂರು:ತಂತ್ರಜ್ಞಾನದಲ್ಲಿ ದಾಪುಗಾಲು ಇಡುತ್ತಿರುವ ನಾವು ಇಂದಿಗೂ ಮಹಿಳೆಯರ ಋತುಚಕ್ರದ ಕಟ್ಟುಪಾಡಿಗೆ ಒಳಗಾಗಿದ್ದೇವೆ. ಈ ಬಗ್ಗೆ ಇಂದಿಗೂ ಇದನ್ನು ದೇಹದ ನೈಸರ್ಗಿಕ ಚಟುವಟಿಕೆ ಎಂಬುದನ್ನು ಮರೆತು ಕಳಂಕ ಎಂಬ ರೀತಿಯಲ್ಲಿ ಕಾಣುತ್ತಿದ್ದೇವೆ. ಜಗತ್ತಿನ ಅನೇಕ ಅಬಿವೃದ್ಧಿಶೀಲ ರಾಷ್ಟ್ರಗಳು ಈ ಮನೋಭಾವದಿಂದ ಹೊರ ಬಂದಿಲ್ಲ ಎಂಬುದು ದುಃಖದ ಸಂಗತಿ.
ಸಾಂಪ್ರದಾಯಿಕ ಮನಸ್ಥಿತಿ ಹೊಂದಿರುವ ಪುರುಷ ಮತ್ತು ಮಹಿಳೆಯರಿಗೆ ಈ ವಿಚಾರದ ಕುರಿತು ಸಾರ್ವಜನಿಕವಾಗಿ ಮಾತನಾಡುವುದು ದೊಡ್ಡ ಕಷ್ಟವಾಗಿದೆ. ಜೊತೆಗೆ ಈ ಋತುಚಕ್ರದ ಶುಚಿತ್ವಕ್ಕೆ ಕಾಳಜಿ ಬಗ್ಗೆ ನಿರ್ಲಕ್ಷ್ಯ ಹೊಂದಲಾಗಿದೆ. ಈ ಹಳೆಯ ಚಿಂತನೆಗಳಲ್ಲಿ ಬದಲಾವಣೆ ತಂದು, ಜನರಿಗೆ ಈ ಋತುಚಕ್ರದ ವಿಚಾರ ಕುರಿತು ಸರಿಯಾದ ಮಾಹಿತಿ ಮತ್ತು ಅರಿವು ಮೂಡಿಸುವ ಪ್ರಯತ್ನವಾಗಬೇಕಿದೆ. ಇದೇ ಕಾರಣಕ್ಕೆ ಮೇ 28ನ್ನು ವಿಶ್ವ ಋತುಚಕ್ರ ನೈರ್ಮಲ್ಯ ದಿನವಾಗಿ ಪರಿಗಣಿಸಲಾಗಿದೆ.
ವಿಶ್ವ ಋತುಚಕದ್ರ ನೈರ್ಮಲ್ಯ ದಿನದ ಮೂಲಕ ಮಹಿಳೆಯರು, ಯುವತಿಯರಿಗೆ ಋತು ಚಕ್ರದ ನೈರ್ಮಲ್ಯ ಮತ್ತು ಸುರಕ್ಷತೆ ಬಗ್ಗೆ ತಿಳಿ ಹೇಳುವ ಪ್ರಯತ್ನ ನಡೆಸಲಾಗುವುದು. ಇದು ಅವರ ಉತ್ತಮ ಆರೋಗ್ಯ ಹೊಂದಲು ಅಗತ್ಯವಾಗಿದೆ. 2013 ರಲ್ಲಿ ವಾಷ್ ಯುನೈಟೆಡ್ ಎಂಬ ಜರ್ಮನ್ ಮೂಲದ ಎನ್ಜಿಒವೊಂದು ಈ ದಿನದ ಸ್ಥಾಪನೆ ಮುಂದಾಯಿತು. ಮೊದಲ ಬಾರಿಗೆ ಮೇ 28 2014ರಂದು ಈ ದಿನವನ್ನು ಆಚರಣೆಗೆ ತರಲಾಯಿತು. 2023 ರಲ್ಲಿ ಅಂದರೆ ಈ ವರ್ಷ ಈ ವಿಶ್ವ ಋತುಚಕ್ರ ನೈರ್ಮಲ್ಯ ದಿನವನ್ನು '2030 ರ ವೇಳೆಗೆ ಋತುಚಕ್ರವು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವುದು' ಎಂಬ ಘೋಷವಾಕ್ಯದ ಮೂಲಕ ಆಚರಣೆ ಮಾಡಲಾಗುತ್ತಿದೆ.