ಹೈದರಾಬಾದ್:ಅಕ್ಟೋಬರ್ 18ನ್ನು ವಿಶ್ವ ಋತುಬಂಧ ದಿನ ಎಂದು ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಮೆನೋಪಾಸ್ ಕಮಿಟಿ (IMS) ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ಅಕ್ಟೋಬರ್ ಅನ್ನು ವಿಶ್ವ ಋತುಬಂಧ ಜಾಗೃತಿ ತಿಂಗಳು ಎಂದು 2009ರಿಂದ ಆಚರಿಸಲಾಗುತ್ತಿದೆ. ಋತುಬಂಧದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಹಿಳೆಯರ ಆರೋಗ್ಯ, ಯೋಗಕ್ಷೇಮವನ್ನು ಸುಧಾರಿಸಲು ಲಭ್ಯವಿರುವ ಬೆಂಬಲ ನೀಡುವುದು ಈ ದಿನದ ಉದ್ದೇಶವಾಗಿದೆ.
ಋತುಬಂಧ ನಿಲ್ಲುವ ಸೂಚನೆ ಏನು?: ವೈದ್ಯಕೀಯ ಪರಿಭಾಷೆಯಲ್ಲಿ, ಋತುಬಂಧವು (Menopause) ಮಹಿಳೆಯರಲ್ಲಿ ಋತುಚಕ್ರದ ಅಂತ್ಯವನ್ನು ಸೂಚಿಸುತ್ತದೆ. ಮಹಿಳೆಗೆ 12 ತಿಂಗಳ ಕಾಲ ಮುಟ್ಟಾಗದಿದ್ದರೇ, ಅದು ಋತುಬಂಧ ನಿಲ್ಲುವ ಸೂಚನೆಯಾಗಿದೆ. ಒಂದು ವೇಳೆ ಋತುಬಂಧ ನಿಂತರೇ, ಮಹಿಳೆ ಮಗುವನ್ನು ಹೆರಲು ಸಾಧ್ಯವಿಲ್ಲ. ಇದು ಅನೇಕ ರೀತಿಯಲ್ಲಿ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಮಹಿಳೆ ಜೀವನದಲ್ಲಿ ಈ ಬದಲಾವಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಕಾಯಿಲೆ ಬರುವ ಸಾಧ್ಯತೆ:ಇದಕ್ಕೂ ಮೊದಲು ಕೆಲವು ವರ್ಷಗಳ ಕಾಲ ಋತುಬಂಧ ಪೂರ್ವದ ಸ್ಥಿತಿಯಲ್ಲಿ ಮಹಿಳೆಯರು ಇರುತ್ತಾರೆ. ಋತುಬಂಧಕ್ಕೆ 8 ರಿಂದ 10 ವರ್ಷಗಳ ಮೊದಲು ಪೆರಿ ಮೆನೋಪಾಸ್ ಆರಂಭವಾಗುತ್ತದೆ. ಈ ಹಂತದಲ್ಲಿ ಎದುರಾಗುವ ಆತಂಕ, ಒತ್ತಡ, ಖಿನ್ನತೆ, ಮಾನಸಿಕ ಸ್ಥಿತಿಯಲ್ಲಿನ ಏರುಪೇರು, ಚೈತನ್ಯ ಕುಗ್ಗಿದಂತೆ ಭಾಸವಾಗುವುದು- ಇಂತಹ ಸ್ಥಿತಿಗಳನ್ನು ನಿರ್ವಹಿಸಲು ಮಾನಸಿಕ ಸಿದ್ಧತೆ ಬೇಕಾಗುತ್ತದೆ. ಮಹಿಳೆ ಋತುಬಂಧಕ್ಕೆ ಒಳಗಾದಾಗ, ಆಕೆಯ ಜೀವನದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಏರಿಳಿತಗಳು ಕಂಡುಬರುತ್ತವೆ. ಅಲ್ಲದೆ, ಮಹಿಳೆಯರು ಕೆಲವು ಕಾಯಿಲೆಗಳಿಂದ ಬಳಲುತ್ತಾರೆ.
ಇದನ್ನೂ ಓದಿ:ಒಂದು ಸಿಗರೇಟ್ ನಿಕೋಟಿನ್ ಮಹಿಳೆಯರ ಈಸ್ಟ್ರೊಜೆನ್ ತಗ್ಗಿಸಬಲ್ಲದು: ಸಂಶೋಧನಾ ವರದಿ
ಈಸ್ಟ್ರೊಜೆನ್ ಮಟ್ಟ ಕಡಿಮೆ: ವಯಸ್ಸಾದ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. 45 ವರ್ಷ ವಯಸ್ಸಿನ ನಂತರ ಇದು ಸಂಭವಿಸುತ್ತದೆ. ಈ ವಯಸ್ಸಿನಲ್ಲಿ ಮಹಿಳೆಯ ಈಸ್ಟ್ರೊಜೆನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಈ ಹಂತವನ್ನು ತಲುಪಲು ಮಹಿಳೆಯರ ಸರಾಸರಿ ವಯಸ್ಸು 51 ವರ್ಷ ಇದೆ. ಭಾರತದಲ್ಲಿ ಋತುಬಂಧದ ಸರಾಸರಿ ವಯಸ್ಸು 46-47 ವರ್ಷಗಳು. ಇದು ಕೆಲವು ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಕಡಿಮೆಯಾಗಿದೆ.
ಮಹಿಳೆಯು 40 ವರ್ಷಕ್ಕಿಂತ ಮೊದಲು ಅದನ್ನು ತಲುಪಿದರೆ, ಅದನ್ನು ಅಕಾಲಿಕ ಋತುಬಂಧ ಎಂದು ಕರೆಯಲಾಗುತ್ತದೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 1% ಮಹಿಳೆಯರು ಅದನ್ನು ಅನುಭವಿಸುತ್ತಾರೆ.