ಬೆಂಗಳೂರು: ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುವುದು. ಈ ಮೂಲಕ ಜಾಗತಿಕವಾಗಿ ಜನರಲ್ಲಿ ಅರಿವು ಮೂಡಿಸುವ ಮೂಲಕ ಮಲೇರಿಯಾ ಮುಕ್ತ ಜಗತ್ತನ್ನು ನಿರ್ಮಾಣಕ್ಕೆ ಮುಂದಾಗಬೇಕಿದೆ. ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಲಕ್ಷಾಂತರ ಜನರು ಇಂದು ಸೊಳ್ಳೆ ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳ ಸದಸ್ಯರು ಮತ್ತು ಸಂಘಟನೆಗಳು ಮಲೇರಿಯ ತಡೆ ಮತ್ತು ಜಾಗೃತಿ ದಿನವಾಗಿ ಈ ದಿನವನ್ನು ಆಚರಿಸುತ್ತಿದೆ.
ಸಾವಿಗೆ ಕಾರಣವಾಗುವ ಸೊಳ್ಳೆ: ಬೇಸಿಗೆಯಲ್ಲಿ ಸಾಮಾನ್ಯವಾಗಿ ಅನೇಕ ಸಮಸ್ಯೆಗಳು ಹೆಚ್ಚು. ಇದರಲ್ಲಿ ಮಲೇರಿಯಾ ಕೂಡ ಒಂದು. ಮಲೇರಿಯಾ ಜ್ವರದ ಬಗ್ಗೆ ಜಾಗತಿಕವಾಗಿ ಜನರಿಗೆ ಅರಿವು ಮೂಡಿಸುವ ಸಲುವಾಗಿ ಏಪ್ರಿಲ್ 25ನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ. ಬೇಸಿಗೆ ಕಾಲದಲ್ಲಿ ಸೊಳ್ಳೆಗಳು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಅಂಕಿ - ಅಂಶದ ಪ್ರಕಾರ, ಪ್ರತಿ ವರ್ಷ 7 ಲಕ್ಷ ಜನರು ಮಲೇರಿಯಾಗೆ ಬಲಿಯಾಗುತ್ತಿದ್ದಾರೆ. ಹೆಣ್ಣು ಸೊಳ್ಳೆ ಕಡಿತದಿಂದ ಈ ಮಲೇರಿಯಾ ಜ್ವರ ಉಲ್ಬಣಗೊಳ್ಳುತ್ತದೆ. ಇದಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಸಾವಿಗೆ ಕಾರಣವಾಗುತ್ತದೆ.
ಮಲೇರಿಯಾ ಜ್ವರ ಸಾಂಕ್ರಾಮಿಕ ಜ್ವರವಾಗಿದ್ದು, ಅನಾಫಿಲಿಸ್ ಸೊಳ್ಳೆಯಿಂದ ಈ ರೋಗ ಹರಡುತ್ತದೆ. ಈ ಅನಾಫಿಲಿಸ್ ಸೊಳ್ಳೆ ಕಚ್ಚಿದಾಗ ಅದು ಪ್ಲಾಸ್ಮೊಡಿಯಂ ಪರಸೈಟ್ ಅನ್ನು ಬಿಡುಗಡೆ ಮಾಡುತ್ತದೆ. ಈ ಸೊಳ್ಳೆ ಅತಿ ಹೆಚ್ಚು ಮಳೆ ಬೀಳುವ, ಚರಂಡಿ, ನದಿ ಕೆನಾಲ್, ಕಾಲುವೆ, ಭತ್ತದ ಗದ್ದೆ, ಬಾವಿ, ಕೆರೆ, ಅಶುದ್ದ ನೀರಿನಲ್ಲಿ ವಾಸವಾಗಿರುತ್ತದೆ. ಈ ಸೊಳ್ಳೆ ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಕಡಿಯುತ್ತದೆ.