ಸಾರ್ವಜನಿಕರಲ್ಲಿ ದೀರ್ಘಕಾಲಿಕ ಸಾಂಕ್ರಾಮಿಕ ರೋಗವಾದ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ಭಾನುವಾರದಂದು 'ವಿಶ್ವ ಕುಷ್ಠರೋಗ ದಿನ'ವನ್ನಾಗಿ ಆಚರಿಸಲಾಗುತ್ತದೆ.
ಆದರೆ, ಭಾರತದಲ್ಲಿ ಯಾವಾಗಲೂ ಜನವರಿ 30ರಂದೇ ಕುಷ್ಠರೋಗ ದಿನವನ್ನು ಆಚರಿಸಲಾಗುತ್ತದೆ. ಏಕೆಂದರೆ, ಇದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪುಣ್ಯತಿಥಿಯನ್ನು ಆಚರಿಸುವ ದಿನವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ 2020 ರಲ್ಲಿ 139 ದೇಶಗಳಲ್ಲಿ ಒಟ್ಟು 1,27,558 ಹೊಸ ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 15 ವರ್ಷದೊಳಗಿನ 8,629 ಮಕ್ಕಳು ಸೇರಿದ್ದಾರೆ. ಮಕ್ಕಳ ಜನಸಂಖ್ಯೆಯಲ್ಲಿ ಹೊಸ ಪ್ರಕರಣ ಪತ್ತೆ ಪ್ರಮಾಣವು ಪ್ರತಿ ಮಿಲಿಯನ್ ಮಕ್ಕಳ ಜನಸಂಖ್ಯೆಗೆ 4.4 ಎಂದು ದಾಖಲಾಗಿದೆ.
ಏನಿದು ಕುಷ್ಠರೋಗ?ಹ್ಯಾನ್ಸೆನ್ಸ್ ಕಾಯಿಲೆ ಎಂದೂ ಕರೆಯಲ್ಪಡುವ ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ, ಇದು ನಿಧಾನಗತಿಯಲ್ಲಿ ಹೆಚ್ಚಾಗುತ್ತದೆ ಮತ್ತು ರೋಗ ಬೆಳವಣಿಗೆ ಹೊಂದುವ ಅವಧಿ 5 ವರ್ಷಗಳು ಎಂದು ಡಬ್ಲ್ಯೂಹೆಚ್ಒ ಹೇಳುತ್ತದೆ. ರೋಗವು ಮುಖ್ಯವಾಗಿ ಚರ್ಮ, ಬಾಹ್ಯ ನರಗಳು, ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮ್ಯೂಕೋಸಲ್ ಮೇಲ್ಮೈಗಳು ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ.
ಕುಷ್ಠರೋಗವು ಆರಂಭಿಕ ಶೈಶವಾವಸ್ಥೆಯಿಂದ ವೃದ್ಧಾಪ್ಯದವರೆಗೆ ಹೀಗೆ ಎಲ್ಲಾ ವಯಸ್ಸಿನಲ್ಲೂ ಕಂಡು ಬರುತ್ತದೆ. ಕುಷ್ಠರೋಗವನ್ನು ಗುಣಪಡಿಸಬಹುದಾಗಿದೆ ಮತ್ತು ಆರಂಭಿಕ ಹಂತಗಳಲ್ಲಿ ಚಿಕಿತ್ಸೆ ನೀಡುವುದರಿಂದ ಅದರಿಂದುಂಟಾಗುವ ಅಂಗವೈಕಲ್ಯವನ್ನು ತಡೆಯಬಹುದು. ಕುಷ್ಠರೋಗವು ಈಗಾಗಲೇ ರೋಗಕ್ಕೆ ತುತ್ತಾದ ವ್ಯಕ್ತಿಗಳೊಂದಿಗೆ ಹತ್ತಿರದ ಸಂಪರ್ಕ ಹೊಂದಿದ್ದೆರೆ, ಅಂದರೆ ಅವರ ಮೂಗು ಮತ್ತು ಬಾಯಿಂದ ಹೊರ ಬೀಳುವ ಹನಿಗಳ ಮೂಲಕ ಇತರರಿಗೆ ಹರಡುತ್ತದೆ.
ಇದನ್ನು 2 ವರ್ಗಗಳಾಗಿ ವಿಂಗಡಿಸಲಾಗಿದೆ :
1. ಪೌಸಿಬಾಸಿಲ್ಲರಿ (ಪಿಬಿ) - ಇದು ಐದು ವರ್ಷದವರೆಗಿನ ಮಕ್ಕಳಲ್ಲಿ ಕಂಡುಬರುವ ಕೆಲವು ಚರ್ಮದ ಗಾಯವಾಗಿದೆ (ತಿಳಿಗೆಂಪು ಅಥವಾ ಕೆಂಪು ಬಣ್ಣ)
2.ಮಲ್ಟಿಬಾಸಿಲರಿ (ಎಂಬಿ)- ಇದು ಐದಕ್ಕಿಂತ ಹೆಚ್ಚು ವರ್ಷದವರಲ್ಲಿ ಕಂಡುಬರುವ ಚರ್ಮದ ಗಾಯಗಳು, ಗಂಟುಗಳು, ಪ್ಲೇಕ್‌ಗಳು, ದಪ್ಪನಾದ ಒಳಚರ್ಮ ಅಥವಾ ಚರ್ಮದ ಒಳನುಸುಳುವಿಕೆಯಾಗಿದೆ