ಹೈದರಾಬಾದ್:ಚಿಕ್ಕ ಮಕ್ಕಳಿಗೆ ಓದಲು ಮತ್ತು ಬರೆಯಲು ಕಷ್ಟವಾಗುವುದು ಸಾಮಾನ್ಯವಾದ ಸಂಗತಿಯಾಗಿದೆ. ಇದು ಒಂದು ಮಗುವಿನಿಂದ ಮತ್ತೊಂದು ಮಗುಗೆ ತುಂಬಾ ವ್ಯತ್ಯಾಸವಿರುತ್ತದೆ. ಹೆಚ್ಚಿನ ಜನರು ಮಕ್ಕಳ ಓದುವ ಮತ್ತು ಬರೆಯುವ ಸಾಮರ್ಥ್ಯದಿಂದ ಅವರ ಬುದ್ಧಿವಂತಿಕೆ ಅಳೆಯುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಕೆಲವೊಮ್ಮೆ, ಮಕ್ಕಳಲ್ಲಿನ ಓದುವ ಮತ್ತು ಬರೆಯುವ ಸಮಸ್ಯೆ ಸೈಕಿಯಾಟ್ರಿಕ್ ಡಿಸ್ಲೆಕ್ಸಿಯಾಕ್ಕೆ ಕಾರಣವಾಗಬಹುದು. ಡಿಸ್ಲೆಕ್ಸಿಯಾವು ಪ್ರಪಂಚದಾದ್ಯಂತ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಕಲಿಕೆಯ ಅಸಾಮರ್ಥ್ಯವಾಗಿದೆ.
ಅಂಕಿ - ಅಂಶಗಳ ಪ್ರಕಾರ, ಈ ಸಮಸ್ಯೆಯು ಪ್ರತಿ 10 ಮಕ್ಕಳಲ್ಲಿ ಒಬ್ಬರಲ್ಲಿ ಕಂಡುಬರುತ್ತದೆ. ಆಗಾಗ್ಗೆ ಪತ್ತೆಯಾದರೂ, ಹೆಚ್ಚಿನ ಜನರು ಅದರ ಕಾರಣಗಳು, ಪರಿಣಾಮಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ.
ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ, ಜಾಗತಿಕವಾಗಿ ಜನರಲ್ಲಿ ಈ ಕಲಿಕೆಯ ಅಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂಟರ್ನ್ಯಾಷನಲ್ ಡಿಸ್ಲೆಕ್ಸಿಯಾ ಅಸೋಸಿಯೇಷನ್ ಅಂತಾರಾಷ್ಟ್ರೀಯವಾಗಿ "ಡಿಸ್ಲೆಕ್ಸಿಯಾ ಜಾಗೃತಿ ವಾರ" ವನ್ನು ಆಚರಿಸುತ್ತದೆ. 2022 ರಲ್ಲಿ, "ಬ್ರೇಕಿಂಗ್ ಥ್ರೂ ಬ್ಯಾರಿಯರ್ಸ್" ಥೀಮ್ ಅಡಿಯಲ್ಲಿ ಈ ವಾರವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 9 ರವರೆಗೆ ಆಚರಿಸಲಾಗುತ್ತಿದೆ.
ಡಿಸ್ಲೆಕ್ಸಿಯಾ ಎಂದು ಹೆಸರಿಟ್ಟ ನೇತ್ರಶಾಸ್ತ್ರಜ್ಞ: ಡಿಸ್ಲೆಕ್ಸಿಯಾವನ್ನು ಮೊದಲು 1881 ರಲ್ಲಿ ಜರ್ಮನ್ ವೈದ್ಯ ಓಸ್ವಾಲ್ಡ್ ಬರ್ಖಾನ್ ಗುರುತಿಸಿದರು. ಇದನ್ನು ಗುರುತಿಸಿದ ಆರು ವರ್ಷಗಳ ನಂತರ, ನೇತ್ರಶಾಸ್ತ್ರಜ್ಞ ರುಡಾಲ್ಫ್ ಬರ್ಲಿನ್ ಅದಕ್ಕೆ 'ಡಿಸ್ಲೆಕ್ಸಿಯಾ' ಎಂದು ಹೆಸರಿಸಿದರು. ಸರಿಯಾಗಿ ಓದಲು ಮತ್ತು ಬರೆಯಲು ಕಲಿಯಲು ತೀವ್ರ ತೊಂದರೆಗಳನ್ನು ಹೊಂದಿರುವ ಚಿಕ್ಕ ಹುಡುಗನ ಪ್ರಕರಣವನ್ನು ವಿಶ್ಲೇಷಿಸುವಾಗ ಬುರ್ಖಾನ್ ಈ ಅಸ್ವಸ್ಥತೆಯ ಅಸ್ತಿತ್ವವನ್ನು ಕಂಡುಹಿಡಿದರು.
ಹ್ಯಾಶ್‌ಟ್ಯಾಗ್ ಬಳಸಲು ಶಿಫಾರಸು:ಡಿಸ್ಲೆಕ್ಸಿಯಾ ಜಾಗೃತಿ ವಾರದಲ್ಲಿ, "ವಿಶ್ವ ಡಿಸ್ಲೆಕ್ಸಿಯಾ ಜಾಗೃತಿ ದಿನ" ವನ್ನು ಅಕ್ಟೋಬರ್ ಮೊದಲ ಗುರುವಾರದಂದು ಆಚರಿಸಲಾಗುತ್ತದೆ. 2022 ರಲ್ಲಿ ವಿಶ್ವ ಡಿಸ್ಲೆಕ್ಸಿಯಾ ಜಾಗೃತಿ ದಿನವನ್ನು ಅಕ್ಟೋಬರ್ 6 ರಂದು ಆಚರಿಸಲಾಗುತ್ತದೆ. ಈ ವರ್ಷ ಯುರೋಪಿಯನ್ ಡಿಸ್ಲೆಕ್ಸಿಯಾ ಅಸೋಸಿಯೇಷನ್ ಈ ಸಂದರ್ಭದಲ್ಲಿ ಡಿಸ್ಲೆಕ್ಸಿಯಾ ಜಾಗೃತಿಯ ಪರಿಕಲ್ಪನೆಯನ್ನು ಉತ್ತೇಜಿಸಲು #edadyslexiaday ಹ್ಯಾಶ್‌ಟ್ಯಾಗ್ ಅನ್ನು ಬಳಸಲು ಶಿಫಾರಸು ಮಾಡಿದೆ.
ಡಿಸ್ಲೆಕ್ಸಿಯಾ, ಇದು ಯಾವ ರೀತಿಯ ಮಾನಸಿಕ ಕಾಯಿಲೆ, ಇದರಿಂದಾಗುವ ಪರಿಣಾಮಗಳೇನು ? ಎಂಬುದನ್ನು ತಿಳಿದುಕೊಳ್ಳಲು ಈಟಿವಿ ಭಾರತದ ಸುಖೀಭವ ತಂಡ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾದ 'ಮ್ಯಾಪ್ ಟಾಕ್' ನ ಪ್ರಧಾನ ಕಾರ್ಯದರ್ಶಿ ಡೆಹ್ರಾಡೂನ್‌ನ ಮನೋವೈದ್ಯ ಡಾ.ವೀಣಾ ಕೃಷ್ಣನ್ ಅವರೊಂದಿಗೆ ಮಾತನಾಡಿದೆ.
ಡಿಸ್ಲೆಕ್ಸಿಯಾ ಒಂದು ಮಾನಸಿಕ ಸ್ಥಿತಿ: ಡಿಸ್ಲೆಕ್ಸಿಯಾ ಎನ್ನುವುದು ಮಗುವಿಗೆ ಮಾಹಿತಿಯನ್ನು ಪಡೆಯಲು, ಅರ್ಥಮಾಡಿಕೊಳ್ಳಲು ಮತ್ತು ಬಳಸಲು ಸಾಧ್ಯವಾಗದ ಮಾನಸಿಕ ಸ್ಥಿತಿಯಾಗಿದೆ ಎಂದು ಡಾ.ಕೃಷ್ಣನ್ ವಿವರಿಸುತ್ತಾರೆ. ಇದು ಕಲಿಕೆಯ ಅಸ್ವಸ್ಥತೆಯಾಗಿದ್ದು, ಸಾಮಾನ್ಯವಾಗಿ ಮಕ್ಕಳಿಗೆ ದಾರಿಯನ್ನು ಗುರುತಿಸಲು, ಅಕ್ಷರಗಳನ್ನು ಗುರುತಿಸಲು, ಪದೇ ಪದೆ ಓದಲು ಮತ್ತು ಬರೆಯಲು, ಅಕ್ಷರಗಳನ್ನು ಅದೇ ರೀತಿಯಲ್ಲಿ ಬರೆಯಲು, ಪದಗಳನ್ನು ಸರಿಯಾಗಿ ಓದಲು ಕಷ್ಟವಾಗುತ್ತದೆ ಮತ್ತು ವಿಷಯವನ್ನು ಅಥವಾ ಪಠ್ಯವನ್ನು ನೆನಪಿಸಿಕೊಳ್ಳುವುದು ಇದರಿಂದ ಕಷ್ಟವಾಗುತ್ತದೆ.
ಕಲಿಕೆ ವೇಗ ನಿಧಾನ: ಡಿಸ್ಲೆಕ್ಸಿಕ್ ಹೊಂದಿರುವ ಮಕ್ಕಳಿಗೆ ಕಪ್ಪು ಹಲಗೆ ಅಥವಾ ಪುಸ್ತಕದಲ್ಲಿನ ವಿಷಯವನ್ನು ಸರಿಯಾಗಿ ನಕಲಿಸಲು ಸಹ ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ, ಈ ಮಕ್ಕಳು ಶೂಲೆಸ್‌ಗಳನ್ನು ಕಟ್ಟುವುದು ಅಥವಾ ಶರ್ಟ್‌ಗಳನ್ನು ಬಟನ್ ಓಪನ್ ಆಗಿರುವುದು ಮುಂತಾದವುಗಳ ಕಡೆಗೂ ಗಮನ ಕೊಡುವುದಿಲ್ಲ. ಈ ಸ್ಥಿತಿಯಿಂದ ಬಳಲುತ್ತಿರುವ ಮಕ್ಕಳ ಕಲಿಯುವ ವೇಗವು ತುಂಬಾ ನಿಧಾನವಾಗಿರುತ್ತದೆ.