ಮಧುಮೇಹ, ಮನುಷ್ಯ ಅತೀ ಹೆಚ್ಚು ಚಿಂತಿಸುವ ಕಾಯಿಲೆ. ಡಯಾಬಿಟಿಸ್, ಸಕ್ಕರೆ ಕಾಯಿಲೆ ಎಂದೆಲ್ಲಾ ಕರೆಸಿಕೊಳ್ಳುವ ಇದು, ಮನುಷ್ಯನ ಜೀವನಕ್ಕೆ ಕಹಿ ಹಿಂಡುವುದೇ ಹೆಚ್ಚು. ಇಂದಿನ ಆಧುನಿಕ ಜೀವನಶೈಲಿ, ಕೆಲಸದ ಒತ್ತಡ, ಆಹಾರ ಪದ್ಧತಿಗಳಿಂದಾಗಿ ಸಣ್ಣ ಮಕ್ಕಳಲ್ಲೇ ಕಾಣಿಸಿಕೊಳ್ಳುತ್ತಿರುವ ಇದು, ಇಳಿ ವಯಸ್ಸಿನಲ್ಲಿ ಮಾತ್ರ ಕಟ್ಟಿಟ್ಟ ಬುತ್ತಿಯಂತಾಗಿದೆ. ಇಂದು ವಿಶ್ವ ಮಧುಮೇಹ ದಿನ.
ವಿಶ್ವ ಮದುಮೇಹ ದಿನದ ಹಿನ್ನೆಲೆ ನಮ್ಮ ಈಟಿವಿ ಭಾರತ, ಕಣಿವೆ ನಾಡು ಜಮ್ಮು ಕಾಶ್ಮೀರದ GMCಯ ಸಹ ಪ್ರಾಧ್ಯಾಪಕ ಹಾಗೂ ಪ್ರಸಿದ್ಧ ಎಂಡೋಕ್ರಿನೋಲಾಜಿಸ್ಟ್ ಡಾ.ನಜೀರ್ ಅಹ್ಮದ್ ಪಾಲಾ ಅವರ ಜೊತೆಗೆ ವಿಶೇಷ ಸಂದರ್ಶನವನ್ನು ನಡೆಸಿದೆ. ಈ ವೇಳೆ ಅನೇಕ ವಿಷಯಗಳನ್ನು ಅವರು ಹಂಚಿಕೊಂಡಿದ್ದು, ಆ ಮಾಹಿತಿ ಇಲ್ಲಿದೆ.
ಜಮ್ಮು ಕಾಶ್ಮೀರದಲ್ಲಿ ಶೇ. 9.5 ರಷ್ಟು ಜನರು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. 40 ವರ್ಷಗಳ ಹಿಂದೆ ಈ ಮಧುಮೇಹ 40 ವರ್ಷಕ್ಕಿಂತ ಮೇಲ್ಪಟ್ಟವರನ್ನು ಬಾಧಿಸುತ್ತಿತ್ತು. ಆದರೆ ಈಗ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರನ್ನು ಮಾತ್ರವಲ್ಲದೆ, ಶಾಲಾ ಮಕ್ಕಳನ್ನೂ ಬಾಧಿಸುತ್ತಿದೆ. ಈ ಕಾಯಿಲೆ ಮಕ್ಕಳಲ್ಲೂ ವೇಗವಾಗಿ ಬೆಳೆಯುತ್ತಿದೆ. ಒಟ್ಟಿನಲ್ಲಿ ಕಾಶ್ಮೀರದಲ್ಲಿ ಮಧುಮೇಹ ಮಹಾಮಾರಿಯಾಗಿ ಪರಿಣಮಿಸುತ್ತಿದೆ.
ಶೇ 50 ರಷ್ಟು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಆದರೆ ಈ ಬಗ್ಗೆ ಅವರಿಗೇ ಅರಿವಿಲ್ಲ. ಹಾಗಾಗಿ ಸಕಾಲದಲ್ಲಿ ಅವರಿಗೆ ಚಿಕಿತ್ಸೆ ದೊರೆಯುವುದಿಲ್ಲ. 100 ರೋಗಿಗಳಲ್ಲಿ 50 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಉಳಿದ 50 ಜನರು ಮಧುಮೇಹದಿಂದ ಬಳಲುತ್ತಿರುವ ಬಗ್ಗೆ ತಿಳಿದಿಲ್ಲದ ಕಾರಣ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.