ಕರ್ನಾಟಕ

karnataka

ETV Bharat / sukhibhava

ವಿಶ್ವ ಕ್ಯಾನ್ಸರ್ ದಿನ: ಕ್ಯಾನ್ಸರ್ ಕುರಿತು ಇರುವ ವದಂತಿಗಳು ಹಾಗೂ ಕಲ್ಪನೆಗಳು - ಕ್ಯಾನ್ಸರ್ ಕುರಿತು ಜಾಗೃತಿ

ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ಅದರ ಬಗ್ಗೆ ಜನರಿಗೆ ತಿಳಿಸಲು ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ಕ್ಯಾನ್ಸರ್ ಕುರಿತಾದ ಕೆಲ ಸಾಮಾನ್ಯ ವದಂತಿಗಳು, ಕಲ್ಪನೆ ಹಾಗೂ ಸುಳ್ಳು ಸುದ್ದಿಗಳ ಕುರಿತು ತಿಳಿಯೋಣ.

cancer day
cancer day

By

Published : Feb 4, 2021, 12:59 PM IST

ಹೈದರಾಬಾದ್:ಕ್ಯಾನ್ಸರ್ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಕ್ಯಾನ್ಸರ್ ಜಾಗತಿಕ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದೆ. 2018ರಲ್ಲಿ ಕ್ಯಾನ್ಸರ್​ನಿಂದ ಅಂದಾಜು 9.6 ಮಿಲಿಯನ್ ಜನ ಸಾವನ್ನಪ್ಪಿದ್ದು, ಜಾಗತಿಕವಾಗಿ 6ರಲ್ಲಿ 1 ಸಾವು ಕ್ಯಾನ್ಸರ್​ನಿಂದ ಸಂಭವಿಸುತ್ತದೆ. ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸಾಮಾನ್ಯವಾಗಿ ಕಂಡುಬರುವ ವಿವಿಧ ರೀತಿಯ ಕ್ಯಾನ್ಸರ್:

ಶ್ವಾಸಕೋಶ (2.09 ಮಿಲಿಯನ್ ಪ್ರಕರಣಗಳು)

ಸ್ತನ (2.09 ಮಿಲಿಯನ್ ಪ್ರಕರಣಗಳು)

ಕೊಲೊರೆಕ್ಟಲ್ (1.80 ಮಿಲಿಯನ್ ಪ್ರಕರಣಗಳು)

ಪ್ರಾಸ್ಟೇಟ್ (1.28 ಮಿಲಿಯನ್ ಪ್ರಕರಣಗಳು)

ಚರ್ಮದ ಕ್ಯಾನ್ಸರ್ (1.04 ಮಿಲಿಯನ್ ಪ್ರಕರಣಗಳು)

ಹೊಟ್ಟೆ (1.03 ಮಿಲಿಯನ್ ಪ್ರಕರಣಗಳು)

ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ಅದರ ಬಗ್ಗೆ ಜನರಿಗೆ ತಿಳಿಸಲು ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡಲು ಜಗತ್ತಿನ ಎಲ್ಲರನ್ನೂ ಒಟ್ಟುಗೂಡಿಸಲು ಪ್ರಯತ್ನ ನಡೆಯುತ್ತಿದೆ.

ಕ್ಯಾನ್ಸರ್ ಎಂದರೇನು ಎಂಬುದರ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ, ಆದರೆ ಕ್ಯಾನ್ಸರ್​ಗೆ ಸಂಬಂಧಿಸಿದ ಕೆಲವು ಸಂಗತಿಗಳು ತಿಳಿದಿಲ್ಲ. ವಿಶ್ವ ಕ್ಯಾನ್ಸರ್ ದಿನದಂದು, ಕ್ಯಾನ್ಸರ್ ಕುರಿತಾದ ಕೆಲ ಸಾಮಾನ್ಯ ವದಂತಿಗಳು, ಕಲ್ಪನೆ ಹಾಗೂ ಸುಳ್ಳು ಸುದ್ದಿಗಳ ಕುರಿತು ತಿಳಿಯೋಣ.

1. ಕ್ಯಾನ್ಸರ್ ಸಾಂಕ್ರಾಮಿಕ!

ಹೆಚ್ಚಿನ ಕ್ಯಾನ್ಸರ್​ಗಳು ಸಾಂಕ್ರಾಮಿಕವಲ್ಲ. ಆದರೆ, ವೈರಸ್​ಗಳು ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುವ ಕೆಲವು ಕ್ಯಾನ್ಸರ್​ಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಹುದು. ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ (ಐಜೆಎಂಆರ್) ಪ್ರಕಾರ, "ಗರ್ಭಕಂಠದ ಕ್ಯಾನ್ಸರ್ (ಹ್ಯೂಮನ್ ಪ್ಯಾಪಿಲೋಮಾ ವೈರಸ್​ನಿಂದ ಉಂಟಾಗುತ್ತದೆ) ಮತ್ತು ಪಿತ್ತಜನಕಾಂಗದ ಕ್ಯಾನ್ಸರ್ (ಹೆಪಟೈಟಿಸ್ ಬಿ ಮತ್ತು ಸಿ ವೈರಸ್​ನಿಂದ ಉಂಟಾಗುತ್ತದೆ) ಹೊರತುಪಡಿಸಿ, ಇತರ ಯಾವುದೇ ರೀತಿಯ ಕ್ಯಾನ್ಸರ್ ಸಾಂಕ್ರಾಮಿಕವಲ್ಲ. ರಕ್ತ ವರ್ಗಾವಣೆ, ಬಳಸಿದ ಸೂಜಿಗಳ ಮರುಬಳಕೆ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆ ಈ ಕ್ಯಾನ್ಸರ್ ಹರಡುವಿಕೆಗೆ ಕಾರಣವಾಗುವ ಸಾಮಾನ್ಯ ವಿಧಾನಗಳಾಗಿವೆ".

2. ಕ್ಯಾನ್ಸರ್ ಯಾವಾಗಲೂ ಮಾರಕವಾಗಿರುತ್ತದೆ

ಇಲ್ಲ. ಕ್ಯಾನ್ಸರ್ ಯಾವಾಗಲೂ ಮಾರಕವಲ್ಲ. ಔಷಧ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಗತಿಯೊಂದಿಗೆ, ಹಲವಾರು ಚಿಕಿತ್ಸೆಗಳು ಲಭ್ಯವಿದೆ. ಆದ್ದರಿಂದ, ಕ್ಯಾನ್ಸರ್ ಚಿಕಿತ್ಸೆಯ ನಂತರ ಬದುಕುಳಿಯುವಿಕೆಯ ಪ್ರಮಾಣವು ಈಗ ಹೆಚ್ಚಾಗಿದೆ. ಆದರೆ, ಒಬ್ಬ ವ್ಯಕ್ತಿಯು ಎಷ್ಟು ದಿನ ಬದುಕುತ್ತಾನೆ ಅಥವಾ ಅವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆಯೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಪರಿಣಾಮಕಾರಿಯಾದ ಚಿಕಿತ್ಸೆಗಳಿದ್ದರೆ ದೇಹದಲ್ಲಿ ಕ್ಯಾನ್ಸರ್ ಎಷ್ಟು ವೇಗದಲ್ಲಿ ಬೆಳೆಯುತ್ತಿದೆ, ದೇಹದಲ್ಲಿ ಈಗಾಗಲೇ ಎಷ್ಟು ಕ್ಯಾನ್ಸರ್ ಹರಡಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

3. ಆಂಟಿಪೆರ್ಸ್ಪಿರಂಟ್ ಮತ್ತು ಡಿಯೋಡ್ರೆಂಟ್​ಗಳು ಸ್ತನ ಕ್ಯಾನ್ಸರ್​ಗೆ ಕಾರಣವಾಗುತ್ತವೆ

ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಕಾರ, ಅತ್ಯುತ್ತಮ ಅಧ್ಯಯನಗಳು ಆಂಟಿಪೆರ್ಸ್ಪಿರಂಟ್ ಮತ್ತು ಡಿಯೋಡ್ರೆಂಟ್​​​​ಗಳಲ್ಲಿ ಕಂಡುಬರುವ ರಾಸಾಯನಿಕಗಳು ಸ್ತನ ಅಂಗಾಂಶದಲ್ಲಿನ ಬದಲಾವಣೆಗೆ ಹಾಗೂ ಸ್ತನ ಕ್ಯಾನ್ಸರ್​ಗೆ ಕಾರಣವಅಗುತ್ತವೆ ಎಂಬ ಯಾವುದೇ ಪುರಾವೆಗಳು ಕಂಡುಬಂದಿಲ್ಲ.

4. ಧೂಮಪಾನಿಗಳಿಗೆ ಮಾತ್ರ ಶ್ವಾಸಕೋಶದ ಕ್ಯಾನ್ಸರ್ ಇರುತ್ತದೆ

ಧೂಮಪಾನವು ಖಂಡಿತವಾಗಿಯೂ ಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಧೂಮಪಾನ ಮಾಡದವರು ಸಹ ಅಪಾಯಕ್ಕೆ ಒಳಗಾಗಬಹುದು. ಕಲ್ನಾರು, ರೇಡಾನ್, ಯುರೇನಿಯಂ, ಆರ್ಸೆನಿಕ್, ಆನುವಂಶಿಕ ಪ್ರವೃತ್ತಿ, ನಿಷ್ಕ್ರಿಯ ಧೂಮಪಾನ ಮತ್ತು ಯಾವುದೇ ಮೊದಲಿನ ಕಾಯಿಲೆಯಿಂದ ಶ್ವಾಸಕೋಶದ ಕ್ಯಾನ್ಸರ್​ಗೆ ಕಾರಣವಾಗಬಹುದು ಎಂದು ಐಜೆಎಂಆರ್ ಹೇಳುತ್ತದೆ.

5. ಸಕ್ಕರೆ ಕ್ಯಾನ್ಸರ್ ಅನ್ನು ಇನ್ನಷ್ಟು ಹದಗೆಡಿಸಬಹುದೇ?

ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹೇಳುವಂತೆ, ಕ್ಯಾನ್ಸರ್ ಕೋಶಗಳು ಸಾಮಾನ್ಯ ಕೋಶಗಳಿಗಿಂತ ಹೆಚ್ಚು ಸಕ್ಕರೆ (ಗ್ಲೂಕೋಸ್) ಸೇವಿಸುತ್ತವೆ ಎಂದು ಸಂಶೋಧನೆ ತೋರಿಸಿದರೂ, ಯಾವುದೇ ಅಧ್ಯಯನಗಳು ಸಕ್ಕರೆ ತಿನ್ನುವುದರಿಂದ ನಿಮ್ಮ ಕ್ಯಾನ್ಸರ್ ಉಲ್ಬಣಗೊಳ್ಳುತ್ತದೆ ಎಂದು ತಿಳಿಸಿಲ್ಲ. ಆದರೆ, ಹೆಚ್ಚಿನ ಸಕ್ಕರೆ ಆಹಾರವು ತೂಕ ಹೆಚ್ಚಿಸಲು ಕಾರಣವಾಗಬಹುದು, ಮತ್ತು ಬೊಜ್ಜಿನಿಂದಾಗಿ ಹಲವಾರು ರೀತಿಯ ಕ್ಯಾನ್ಸರ್ ತೀವ್ರವಾಗುವ ಅಪಾಯವಿದೆ.

6. ಪುರುಷರಿಗೆ ಸ್ತನ ಕ್ಯಾನ್ಸರ್ ಉಂಟಾಗುವುದಿಲ್ಲ

ತಪ್ಪು. ಪುರುಷರು ಸಹ ಸ್ತನ ಅಂಗಾಂಶಗಳನ್ನು ಹೊಂದಿರುವುದರಿಂದ, ಅವರೂ ಸಹ ಸ್ತನ ಕ್ಯಾನ್ಸರ್​​ಗೆ ತುತ್ತಾಗಬಹುದು. ಪುರುಷರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ತೀರಾ ಕಡಿಮೆ ಇದ್ದರೂ, ಅವರು ಕೂಡಾ ಇದರ ಅಪಾಯದಲ್ಲಿದ್ದಾರೆ.

7. ಸಕಾರಾತ್ಮಕ ಮನಸ್ಥಿತಿ ಕ್ಯಾನ್ಸರ್ ಗುಣಪಡಿಸುತ್ತದೆ

ಯಾವುದೇ ಚಿಕಿತ್ಸೆಯ ಸಮಯದಲ್ಲಿ ಸಕಾರಾತ್ಮಕ ಮನೋಭಾವವನ್ನು ಹೊಂದಿರುವುದು ತುಂಬಾ ಅಗತ್ಯವಾಗಿರುತ್ತದೆ. ಆದರೆ, ಕೇವಲ ಸಕಾರಾತ್ಮಕ ಮನೋಭಾವ ಕ್ಯಾನ್ಸರನ್ನು ಗುಣಪಡಿಸುವುದಿಲ್ಲ. ಕ್ಯಾನ್ಸರ್ ರೋಗಿಗಳಲ್ಲಿ ಔಷಧ ಮತ್ತು ಚಿಕಿತ್ಸೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

ಕ್ಯಾನ್ಸರ್ ಕುರಿತಾದ ಇನ್ನೂ ಅನೇಕ ವದಂತಿಗಳು, ಕಲ್ಪನೆ ಹಾಗೂ ಸುಳ್ಳು ಸುದ್ದಿಗಳನ್ನು ಜನ ನಂಬುತ್ತಿದ್ದಾರೆ. ಇವುಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕಾಗಿದೆ ಮತ್ತು ಜನರು ಕ್ಯಾನ್ಸರ್ ಬಗ್ಗೆ ನಿಜವಾದ ಸಂಗತಿಗಳನ್ನು ತಿಳಿಯಬೇಕಿದೆ. ಜನರನ್ನು ದಾರಿತಪ್ಪಿಸುವುದು ಮತ್ತು ವದಂತಿಗಳಿಂದ ಅವರನ್ನು ಹೆದರಿಸುವುದು ಆತಂಕಕ್ಕೆ ಕಾರಣವಾಗುವುದರಿಂದ ಇದು ಅವರ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ಈ ರೋಗದ ವಿರುದ್ಧ ಹೋರಾಡಲು ಎಲ್ಲರೂ ಒಗ್ಗೂಡಬೇಕು.

ABOUT THE AUTHOR

...view details