ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಾಗತಿಕವಾಗಿ ಪ್ರತಿ ವರ್ಷ ಸುಮಾರು 8 ಮಿಲಿಯನ್ ನವಜಾತ ಶಿಶುಗಳು ಜನನ ದೋಷಗಳೊಂದಿಗೆ ಹುಟ್ಟುತ್ತೀವೆ. ಅದೇ ಸಮಯದಲ್ಲಿ ಭಾರತದಲ್ಲಿ 1.7 ಮಿಲಿಯನ್ ಗಿಂತ ಹೆಚ್ಚು ಶಿಶುಗಳು ಜನನ ದೋಷಗಳೊಂದಿಗೆ ಹುಟ್ಟುತ್ತೀವೆ. ಎಸ್ಐಡಿಐ ಪ್ರಕಾರ, ಜನನ ದೋಷಗಳು ಅಥವಾ ಜನ್ಮಜಾತ ವೈಪರೀತ್ಯಗಳು ಹುಟ್ಟಿದ ಸ್ಥಳ, ಜನಾಂಗೀಯತೆಯನ್ನು ಲೆಕ್ಕಿಸದೇ ಶಿಶುಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ವಿಶ್ವಾದ್ಯಂತ ನವಜಾತ ಶಿಶುಗಳು ಮತ್ತು ಚಿಕ್ಕ ಮಕ್ಕಳ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮಕ್ಕಳು ಈ ವೈಪರೀತ್ಯಗಳಿಂದ ಚೇತರಿಸಿಕೊಂಡರೂ, ಅವರಲ್ಲಿ ಅನೇಕರು ಜೀವನಪರ್ಯಂತ ಅಂಗವೈಕಲ್ಯವನ್ನು ಎದುರಿಸಬೇಕಾಗಬಹುದು ಎಂಬುದು ಕಳವಳಕಾರಿ ವಿಷಯವಾಗಿದೆ.
ಜನನ ದೋಷಗಳ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರು ಮತ್ತು ಸಂಸ್ಥೆಗಳನ್ನು ಒಗ್ಗೂಡಿಸುವ ಹಾಗೂ ಜನ್ಮಜಾತ ವೈಪರೀತ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಪ್ರತಿವರ್ಷ ಮಾರ್ಚ್ 3 ರಂದು ವಿಶ್ವ ಜನನ ದೋಷ ದಿನವನ್ನು ಆಚರಿಸಲಾಗುತ್ತದೆ.
ಜನನ ದೋಷಗಳಿಂದ ಉಂಟಾಗುವ ತೊಂದರೆಗಳು:ಜನ್ಮಜಾತ ವೈಪರೀತ್ಯಗಳು ಅನೇಕ ರೀತಿಯ ಜನನ ದೋಷಗಳನ್ನು ಒಳಗೊಂಡಿರಬಹುದು. ಜನ್ಮಜಾತ ವೈಪರೀತ್ಯವು ವಾಸ್ತವವಾಗಿ ಮಗು ಕೆಲವು ನ್ಯೂನತೆ, ವಿರೂಪತೆ, ಅಸ್ವಸ್ಥತೆ ಅಥವಾ ಕಾಯಿಲೆಯೊಂದಿಗೆ ಜನಿಸುವ ಹಂತವಾಗಿದೆ. ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಜನ್ಮಜಾತ ವೈಪರೀತ್ಯಗಳೆಂದರೆ ಸೀಳು ತುಟಿ, ಡೌನ್ ಸಿಂಡ್ರೋಮ್, ಜನ್ಮಜಾತ ಕಿವುಡುತನ, ಟ್ರೈಸೋಮಿ 18, ಕ್ಲಬ್ಫೂಟ್, ಹೃದಯ ದೋಷಗಳು, ನರನಾಳದ ದೋಷಗಳು, ಕುಡಗೋಲು ಕೋಶ ರಕ್ತಹೀನತೆ ಮತ್ತು ಸಿಸ್ಟಿಕ್ ಫೈಬ್ರೋಸಿಸ್ ಮತ್ತು ಕ್ರೋಮೋಸೋಮಲ್ ಅಸಹಜತೆಗಳು ಸೇರಿವೆ. ಜನ್ಮಜಾತ ವೈಪರೀತ್ಯಗಳು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಆನುವಂಶಿಕ ಸಮಸ್ಯೆಗಳು ತಾಯಿಯಲ್ಲಿ ಅಥವಾ ಗರ್ಭದಲ್ಲಿರುವ ಮಗುವಿನಲ್ಲಿ ಕೆಲವು ರೀತಿಯ ಕಾಯಿಲೆ, ಸೋಂಕು ಅಥವಾ ಪೋಷಣೆಯ ಕೊರತೆ ಕಾರಣವೆಂದು ತಿಳಿಬಂದಿದೆ.
ಆಗ್ನೇಯ ಏಷ್ಯಾ ಪ್ರದೇಶದಲ್ಲಿ, ಜನನ ದೋಷಗಳು ಶಿಶು ಮರಣಕ್ಕೆ ಮೂರನೇ ಅತ್ಯಂತ ಸಾಮಾನ್ಯ ಕಾರಣವಾಗಿದೆ ಮತ್ತು ನವಜಾತ ಶಿಶುಗಳ ಮರಣಕ್ಕೆ ನಾಲ್ಕನೇ ಸಾಮಾನ್ಯ ಕಾರಣವಾಗಿದೆ ಎಂದು WHO ಅಂಕಿ- ಅಂಶಗಳು ತಿಳಿಸಿವೆ. ಇದು ಎಲ್ಲಾ ನವಜಾತ ಶಿಶುಗಳ ಸಾವುಗಳಲ್ಲಿ ಸುಮಾರು ಶೇ12ರಷ್ಟಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2010 ಮತ್ತು 2019 ರ ನಡುವೆ, ಈ ಪ್ರದೇಶಗಳಲ್ಲಿ ಜನನ ದೋಷಗಳು ಮತ್ತು ಶಿಶು ಮರಣದ ಅನುಪಾತವು 6.2% ರಿಂದ 9.2% ಕ್ಕೆ ಏರಿಕೆಯಾಗಿದೆ.