ಬೆಂಗಳೂರು: ಅಲ್ಝೈಮರ್ ಎಂಬುದು ಮಿದುಳಿನ ಸಮಸ್ಯೆ. ಈ ರೋಗವನ್ನು ಅನೇಕ ಮಂದಿ 'ಸಾಮಾನ್ಯ ಮರೆಗುಳಿತನ' ಎಂದು ಪರಿಗಣಿಸುತ್ತಾರೆ. ಅಲ್ಝೈಮರ್ ಉಂಟಾಗಲು ಕಾರಣವೇನು? ಇದರ ಪತ್ತೆ ಮತ್ತು ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್ 21ರಂದು ವಿಶ್ವ ಅಲ್ಝೈಮರ್ ದಿನವನ್ನಾಗಿ ಆಚರಿಸಲಾಗುತ್ತದೆ. ಸಂಪೂರ್ಣ ಸೆಪ್ಟೆಂಬರ್ ತಿಂಗಳು ಅಲ್ಝೈಮರ್ ಜಾಗೃತಿ ನಡೆಯುತ್ತದೆ. 2023ರ ಅಂದರೆ ಈ ವರ್ಷದ ವಿಶ್ವ ಅಲ್ಝೈಮರ್ ದಿನದ ಧ್ಯೇಯ ವಾಕ್ಯ 'Never too early never too late'.
ಅಲ್ಝೈಮರ್ ಎಂದರೇನು?:ಅಲ್ಝೈಮರ್ ಎಂಬುದು ನರದ ಸಮಸ್ಯೆ. ಇದು ಮಿದುಳಿನ ನಿರ್ಣಾಯಕ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತದೆ. ಸಮಸ್ಯೆ ಪತ್ತೆಯಾದ ಕಾಲಾನಂತರದಲ್ಲಿ ರೋಗಿ ನಿಧಾನವಾಗಿ ತಮ್ಮ ನೆನಪಿನ ಶಕ್ತಿ ಮತ್ತು ಚಿಂತನಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಇದು ಸಂಪೂರ್ಣ ಸ್ಮರಣೆ ನಷ್ಟಕ್ಕೂ ಕಾರಣವಾಗುತ್ತದೆ. ಇದರಿಂದ ದೈನಂದಿನ ಚಟುವಟಿಕೆ ನಿರ್ವಹಣೆಯೇ ಕಷ್ಟವಾಗುತ್ತದೆ.
ಡೆಮನ್ಶಿಯಾ ಮತ್ತು ಅಲ್ಝೈಮರ್ ಎರಡು ವಿಭಿನ್ನ ಸಮಸ್ಯೆಗಳು. ಡೆಮನ್ಶಿಯಾ ಎಂಬುದು ಸ್ಮರಣೆ ನಷ್ಟ ಮತ್ತು ನಡುವಳಿಕೆಯ ತೊಂದರೆ. ಅಲ್ಝೈಮರ್ ಎಂಬುದು ನಿರ್ದಿಷ್ಟ ರೋಗ. ಅಲ್ಝೈಮರ್ ಲಕ್ಷಣಗಳು ಸಾಮಾನ್ಯವಾಗಿ 65 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ. ಕೆಲವು ನಿರ್ದಿಷ್ಟ ಪರಿಸ್ಥಿತಿ ಅಥವಾ ಅನಾರೋಗ್ಯದ ಹಿನ್ನೆಲೆಯಲ್ಲಿ ಇದು ಬೇಗನೇ ಶುರುವಾಗುತ್ತದೆ.